ಬೆಂಗಳೂರು: ‘ಪ್ರಸಿದ್ಧ ಲೇಖಕರು ಬರೆದ ಕೆಟ್ಟ ಕಾವ್ಯ ಅಥವಾ ಕಾದಂಬರಿ ಓದುವ ಬದಲು, ಜನಸಾಮಾನ್ಯರ ಹಾಗೂ ವಿವಿಧ ಕ್ಷೇತ್ರಗಳ ಜನರ ಆತ್ಮಕಥನಗಳನ್ನು ಓದಲು ಬಯಸುತ್ತೇನೆ’ ಎಂದುಚಿಂತಕ ರಹಮತ್ ತರೀಕೆರೆ ತಿಳಿಸಿದರು.
ವಿಶ್ವ ಪುಸ್ತಕ ದಿನದ ಅಂಗವಾಗಿ ಪುಸ್ತಕ ಪ್ರೀತಿ ಹಾಗೂಜನಶಕ್ತಿ ಮೀಡಿಯಾ ಸಹಯೋಗದಲ್ಲಿ ಆನ್‌ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರೇಣುಕಾ ನಿಡಗುಂದಿ ಕನ್ನಡಕ್ಕೆ ಅನುವಾದಿಸಿರುವ ‘ಅಲೆಮಾರಿಯೊಬ್ಬಳ ಆತ್ಮ ವೃತ್ತಾಂತ’ ಕೃತಿ ಕುರಿತು ಮಾತನಾಡಿದರು.
‘ಲೇಖಕರು ಎಂದು ಪ್ರತಿಷ್ಠಾಪಿತಗೊಳ್ಳದವರು ಕೂಡ ತಮ್ಮ ಜೀವನದ ಅನುಭವಗಳನ್ನು ಬರೆಯುವ ಹೊಸ ಪ್ರಕಾರ ಹಾಗೂ ಆಯಾಮ ಕನ್ನಡ ಸಾಹಿತ್ಯ ಪ್ರವೇಶಿಸಿದೆ. ಬೇರೆ ಭಾಷೆಯ ಆತ್ಮಕಥನಗಳನ್ನೂ ತಮ್ಮದೇ ಎಂದು ಸ್ವೀಕರಿಸುವ ಪ್ರವೃತ್ತಿ ಬೆಳೆದಿದೆ’ ಎಂದರು.
‘ಸಾಮಾನ್ಯವಾಗಿ ಆತ್ಮಕಥನಗಳಲ್ಲಿ ಬಾಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿರುತ್ತದೆ. ಆದರೆ, ಈ ಕೃತಿಯಲ್ಲಿ ಬಾಲ್ಯದ ವಿನ್ಯಾಸವನ್ನು ಮುರಿಯಲಾಗಿದೆ. ಮಹಿಳಾ ಆತ್ಮಕಥೆಗಳಲ್ಲಿ ಹೊಸ ಆಯಾಮಗಳು ಕಂಡುಬರುತ್ತಿದ್ದು,ರೈತ, ರಂಗಕರ್ಮಿ, ಪತ್ರಕರ್ತ, ನಟ–ನಟಿ, ರಾಜಕಾರಣಿಗಳ ಆತ್ಮಕಥನಗಳು ಹೊಸ ವಿನ್ಯಾಸದಿಂದ ಕೂಡಿವೆ. ಇದರಿಂದ ಕನ್ನಡ ಸಾಹಿತ್ಯದ ಜೀವಂತಿಕೆ ಹೆಚ್ಚುತ್ತಿದೆ’ ಎಂದು ಹೇಳಿದರು.
ಲೇಖಕಿ ರೇಣುಕಾ ನಿಡಗುಂದಿ,‘ಈ ಅನುವಾದಿತ ಕೃತಿ ಮೂಲ ಅಜಿತ್ ಕೌರ್ ಅವರದ್ದು. ಪಂಜಾಬ್‌ನ ಘಟನೆಗಳನ್ನು ಅನುವಾದಿಸುವಾಗ ಕೆಲವು ಬಾರಿ ಭಾಷಾ ಸಮಸ್ಯೆ ಎದುರಾಯಿತು. ಕೊನೆಗೆ ಅಲ್ಲಿನ ಭಾಷಿಕರನ್ನೇ ಸಂಪರ್ಕಿಸಿ, ಅದೇ ರೀತಿ ಕನ್ನಡದಲ್ಲಿ ಕೃತಿ ಹೊರತರಲು ಸಹಕಾರಿಯಾಯಿತು’ ಎಂದರು.
ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.