ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಕಡೆಗಣಿಸಿದ ಕೇಂದ್ರ: ಪತ್ರಕರ್ತ ಪಿ. ಸಾಯಿನಾಥ್

‘ಕೊನೆಯ ಹೀರೋಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ. ಸಾಯಿನಾಥ್ ಬೇಸರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 16:01 IST
Last Updated 1 ಅಕ್ಟೋಬರ್ 2023, 16:01 IST
   

ಬೆಂಗಳೂರು: ‘ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ‘ಆಜಾದಿ ಕಾ ಅಮೃತ್ ಮಹೋತ್ಸವ್’ ಪೋರ್ಟಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಅವರ ಸಂದೇಶಗಳನ್ನು ಬಿಟ್ಟರೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪತ್ರಕರ್ತ ಪಿ. ಸಾಯಿನಾಥ್ ಬೇಸರ ವ್ಯಕ್ತಪಡಿಸಿದರು.

ಬಹುರೂಪಿ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಜಿ.ಎನ್. ಮೋಹನ್ ಅನುವಾದಿಸಿರುವ ತಮ್ಮ ಕೃತಿ ‘ಕೊನೆಯ ಹೀರೋಗಳು: ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರು’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘‌ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಈ ಪೋರ್ಟಲ್ ರೂಪಿಸಲಾಗಿದೆ. ಇದರಲ್ಲಿ ಈಗಲೂ ನಮ್ಮ ನಡುವಿರುವ  ಸ್ವಾತಂತ್ರ್ಯ ಹೋರಾಟಗಾರರ ಒಂದೇ ಒಂದು ಫೋಟೊ, ಲೇಖನ, ವಿಡಿಯೊ ಸಿಗುವುದಿಲ್ಲ. ಎಲ್ಲವೂ ನರೇಂದ್ರ ಮೋದಿ ಕೇಂದ್ರೀಕೃತವಾಗಿದೆ. ಜೊತೆಗೆ ಹಲವು ಅನಗತ್ಯ ಮಾಹಿತಿಗಳನ್ನು ತುರುಕಲಾಗಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಯುವ ಸಮುದಾಯಕ್ಕೆ ನೆನಪಿಸುವ ಕೆಲಸ ಮಾಡಿಲ್ಲ’ ಎಂದು ದೂರಿದರು.

ADVERTISEMENT

‘ದೇಶದ ಸ್ವಾತಂತ್ರ್ಯಕ್ಕಾಗಿ ಮಹಿಳೆಯರು ಸೇರಿದಂತೆ ಹಲವರು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಲವು ಮಹಿಳೆಯರು ಹೋರಾಟಗಾರರಿಗೆ ಅನ್ನ–ಆಹಾರ ನೀಡಿದ್ದಾರೆ. ಅವರಿಗೆ ರಕ್ಷಣೆ ನೀಡಿ, ಬ್ರಿಟಿಷರ ದಾಳಿಯಿಂದ ರಕ್ಷಿಸಿದ್ದಾರೆ. ವಾಸ್ತವದಲ್ಲಿ ಇವರೆಲ್ಲ ಸ್ವಾತಂತ್ರ್ಯ ಹೋರಾಟಗಾರರೆ. ಆದರೆ, ಕೇಂದ್ರ ಸರ್ಕಾರ, ಸ್ವಾತಂತ್ರ್ಯ ಹೋರಾಟಗಾರರೆಂದರೆ, ಜೈಲು ಶಿಕ್ಷೆ ಅನುಭವಿಸಿರಬೇಕು ಎಂಬ ಮಾನದಂಡವನ್ನು ‘ಸ್ವತಂತ್ರ ಸೈನಿಕ ಸಮ್ಮಾನ್’ ಯೋಜನೆಯಡಿ ವಿಧಿಸಿದೆ. ಇದರಿಂದ ಹಲವರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಜೈಲಿಗೆ ಹೋಗಿ ಬಂದವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರೇ’ ಎಂದು ಪ್ರಶ್ನಿಸಿದರು.

ರಸ್ತೆಗೆ ಬಂದ ಕೋಮುವಾದ: ‌ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ, ‘ಅತ್ಯಂತ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. 1992ರಲ್ಲಿ ಎಲ್.ಕೆ.ಅಡ್ವಾಣಿ ಅವರು ರಥೆಯಾತ್ರೆ ನಡೆಸಿದರು. ಅದು ಭಾರತವನ್ನು ಆಳವಾಗಿ ಘಾಸಿಗೊಳಿಸಿತು. ಈ ಗಾಯ ಮಾಯಲು ತುಂಬಾ ಸಮಯಬೇಕು. ಈಗ ಕೋಮುವಾದ ಡಾಂಬರು ರಸ್ತೆಗೆ ಬಂದು ತಲುಪಿದೆ. ರಸ್ತೆಯ ಮೇಲಿನ ಬಿಳಿ ಗೆರೆಯ ಆಚೆಗೆ ಮುಸ್ಲಿಮರು ಈಚೆಗೆ ಹಿಂದೂಗಳು ಎಂದು ನಿರ್ಬಂಧಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ನಮ್ಮಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವು ತೆರೆಮರೆಯ ಹೀರೋಗಳಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಿಲ್ಲ. ಭಾರತದ ಇವತ್ತಿನ ಪರಿಸ್ಥಿತಿಯಲ್ಲಿ ಯುವಜನರಿಗೆ ನಮ್ಮ ಚರಿತ್ರೆಯ ಬಗ್ಗೆ ತಿಳಿದಿಲ್ಲ. ಕಲ್ಪಿತ ಕಥೆಗಳಲ್ಲಿ ಬರುವ ‘ಉರಿಗೌಡ, ನಂಜೇಗೌಡ’ರನ್ನು ನಂಬುವವರೇ ಜಾಸ್ತಿ. ಇತಿಹಾಸ ಪ್ರಾಧ್ಯಾಪಕರು ಇಂಥವುಗಳಿಗೆ ಪ್ರತಿಕ್ರಿಯಿಸಿ, ಇದು ಸತ್ಯವಲ್ಲವೆಂದು ಮನವರಿಕೆ ಮಾಡಿಸಬೇಕಿತ್ತು. ಆದರೆ, ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರು ಆ ಕೆಲಸ ಮಾಡಿ, ಚರ್ಚೆ ಅಂತ್ಯಗೊಳಿಸಬೇಯಿತು. ಇದು ದುರದೃಷ್ಟಕರ’ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅನೇಕ ಮಂದಿ ಕೊಡುಗೆ ನೀಡಿದ್ದಾರೆ. ಬೆಳಕಿಗೆ ಬರದವರು ಚರಿತ್ರೆಯಲ್ಲಿ ದಾಖಲಾಗದವರನ್ನು ಮುನ್ನೆಲೆಗೆ ತರುವ ಕೆಲಸ ಆಗಬೇಕು.
-ಎಚ್.ಎನ್. ನಾಗಮೋಹನದಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಪುಸ್ತಕ ಪರಿಚಯ  ಪುಸ್ತಕ: ‘ಕೊನೆಯ ಹೀರೋಗಳು: ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರು’ ಮೂಲ ಲೇಖಕ: ಪಿ. ಸಾಯಿನಾಥ್ ಅನುವಾದಕ: ಜಿ.ಎನ್. ಮೋಹನ್ ಪುಟಗಳು: 250 ಬೆಲೆ: ₹ 300 ಪ್ರಕಾಶನ: ಬಹುರೂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.