ಬೆಂಗಳೂರು: ಹೈಟೆನ್ಷನ್ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ 10 ವರ್ಷದ ಬಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೃತ ಬಾಲಕ ಅನಂತ್‍ನ ತಾಯಿ ತುಲಾವೋರ್ ನೀಡಿರುವ ದೂರಿನ ಮೇರೆಗೆ ಮನೆ ಮಾಲೀಕ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂ ಎಂಜಿನಿಯರ್‌ಗಳು, ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 106 (ನಿರ್ಲಕ್ಷ್ಯತನದಿಂದ ಸಾವಿಗೆ ಕಾರಣ) ಆರೋಪದಡಿ ಪ್ರಕರಣ ದಾಖಲಾಗಿದೆ.
‘ಅನಧಿಕೃತವಾಗಿ, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿರುವ ಮನೆ ಮಾಲೀಕ ಬಾಲರಾಜ್, ಹೈಟೆನ್ಷನ್ ತಂತಿಗಳಿಗೆ ಕವರಿಂಗ್ ಅಳವಡಿಸದ ಕೆಪಿಟಿಸಿಎಲ್, ಬೆಸ್ಕಾಂ ಎಂಜಿನಿಯರ್‌ಗಳು ಹಾಗೂ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಮಗನ ಸಾವು ಸಂಭವಿಸಿದೆ’ ಎಂದು ತುಲಾವೋರ್ ದೂರು ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ತುಲಾವೋರ್ ಅವರು ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡು ಮಕ್ಕಳನ್ನು ಪೋಷಿಸುತ್ತಿದ್ದರು. ಮೇ 15ರಂದು ಸಂಜೆ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕ, ಪೊರಕೆ ಎಸೆಯಲು ತೆರಳಿದ್ದ. ಆ ವೇಳೆ ಬಾಲಕನ ಕೈಯಲ್ಲಿದ್ದ ಪೊರಕೆ ಮನೆಯ ಪಕ್ಕದಲ್ಲಿ ಹಾದು ಹೋಗಿರುವ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿತ್ತು. ಇದರಿಂದ ತೀವ್ರವಾಗಿ ವಿದ್ಯುತ್ ಶಾಕ್ ಹೊಡೆದಿತ್ತು. ತಕ್ಷಣ ಬಾಲಕನನ್ನು ಆತನ ಚಿಕ್ಕಪ್ಪ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.
‘ವಿಕ್ಟೋರಿಯಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ವಿಭಾಗಕ್ಕೆ ಪೊಲೀಸರಿಂದ ಅನುಮತಿ ದೊರೆಯದ ಕಾರಣ ಆಸ್ಪತ್ರೆ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ’ ಎಂದು ಪೋಷಕರು ಆರೋಪಿಸಿದರು. ಬಳಿಕ ಕೆ.ಆರ್.ಪುರಂ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.