ADVERTISEMENT

ಶೆಡ್‌ಗೆ ನುಗ್ಗಿ ಬಾಲಕನ ಹತ್ಯೆ; ತವರೂರಿನವನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 20:58 IST
Last Updated 19 ಡಿಸೆಂಬರ್ 2020, 20:58 IST
‌ಆರೋಪಿ ಗಾದಿಲಿಂಗಪ್ಪ ಹಾಗೂ ಆತನನ್ನು ಬಂಧಿಸಿದ ಜ್ಞಾನಭಾರತಿ ಪೊಲೀಸರ ತಂಡ
‌ಆರೋಪಿ ಗಾದಿಲಿಂಗಪ್ಪ ಹಾಗೂ ಆತನನ್ನು ಬಂಧಿಸಿದ ಜ್ಞಾನಭಾರತಿ ಪೊಲೀಸರ ತಂಡ   

ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ರಾಜು (12) ಎಂಬಾತನನ್ನು ಕತ್ತು ಹಿಸುಕಿ ಕೊಂದು, ಅವರ
ತಾಯಿ ಹನುಮಂತವ್ವ (27) ಎಂಬುವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ ಆರೋಪಿ ಗಾದಿಲಿಂಗಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಡಿ. 16ರಂದು ರಾತ್ರಿ ಕೃತ್ಯ ನಡೆದಿತ್ತು. ಅದಾದ ಎಂಟು ಘಂಟೆಯಲ್ಲೇ ಆರೋಪಿ ಸುಳಿವು ಪತ್ತೆ ಮಾಡಿ, ಆತನನ್ನು ಬಂಧಿಸಲಾಗಿದೆ. ಹನುಮಂತವ್ವ ಬಳಿ ಇದ್ದ ಚಿನ್ನಾಭರಣ ದೋಚುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಆರೋಪಿ ಗಾದಿಲಿಂಗಪ್ಪ, ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಎಮ್ಮಿಗನೂರಿನವ. ಅದೇ ಗ್ರಾಮದ ನಿವಾಸಿ ಹನುಮಂತವ್ವ, ಶಿರಗುಪ್ಪ ತಾಲ್ಲೂಕಿನ ಬಸವರಾಜ್‌ ಅವರನ್ನು ಮದುವೆಯಾಗಿದ್ದರು. ಕೆಲಸ ಅರಸಿ ದಂಪತಿ ಬೆಂಗಳೂರಿಗೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ADVERTISEMENT

‘ಬಸವರಾಜ್ ಹಾಗೂ ಹನುಮಂತವ್ವ ದಂಪತಿಯ ದತ್ತು ಪುತ್ರನೇ ರಾಜು. ಜೊತೆಗೆ, ಅವರಿಗೆ ಸ್ವಂತ ಮಗ ಸಹ ಇದ್ದಾನೆ. ಇಡೀ ಕುಟುಂಬ, ಜ್ಞಾನಗಂಗಾ ನಗರದಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸವಿತ್ತು’ ಎಂದೂ ಪೊಲೀಸರು ತಿಳಿಸಿದರು.

ಹನುಮಂತವ್ವ ಅವರ ತವರು ಊರಿನವನೇ ಆಗಿದ್ದ ಆರೋಪಿ ಗಾದಿಲಿಂಗಪ್ಪ, ಸೀಗೇಹಳ್ಳಿ ಬಳಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆಗಾಗ ಹನುಮಂತವ್ವ ಮನೆಗೂ ಬಂದು ಹೋಗುತ್ತಿದ್ದ. ಬಸವರಾಜ್‌ ಅವರಿಗೂ ಆತ ಪರಿಚಯವಿದ್ದ. ಡಿ. 14ರಂದು ಬಸವರಾಜ್, ಕೆಲಸ ನಿಮಿತ್ತ ಊರಿಗೆ ಹೋಗಿದ್ದರು. ಆ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ, ಕುಶಲೋಪರಿ ವಿಚಾರಿಸುವ ಸೋಗಿನಲ್ಲಿ ಶೆಡ್‌ಗೆ ಬಂದಿದ್ದ.

‘ಆರಂಭದಲ್ಲಿ ಚೆನ್ನಾಗಿ ಮಾತನಾಡಿದ್ದ ಗಾದಿಲಿಂಗಪ್ಪ, ಚಿನ್ನಾಭರಣ ನೀಡುವಂತೆ ಹನುಮಂತವ್ವ ಅವರನ್ನು ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪದಿದ್ದಾಗ, ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ. ಪಕ್ಕದಲ್ಲೇ ಇದ್ದ ರಾಜುವಿನ ಕುತ್ತಿಗೆ ಹಿಸುಕಿ ಕೊಂದಿದ್ದ. ಕೃತ್ಯ ಎಸಗಿ ಸೀಗೇಹಳ್ಳಿ ಬಳಿ ಇರುವ ತನ್ನ ಶೆಡ್‌ಗೆ ಹೋಗಿದ್ದ ಆರೋಪಿ, ಅಲ್ಲಿಯೇ ಚಿನ್ನಾಭರಣ ಮುಚ್ಚಿಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ₹1 ಲಕ್ಷ ತುಂಬಿದ ಇನ್‌ಸ್ಪೆಕ್ಟರ್
ಹನುಮಂತವ್ವ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಎರಡು ಕಣ್ಣುಗಳಿಗೂ ಗಾಯವಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದು, ಕೂಲಿ ಕಾರ್ಮಿಕರಾಗಿರುವ ಕುಟುಂಬದವರಿಗೆ ಶಸ್ತ್ರಚಿಕಿತ್ಸೆ ವೆಚ್ಚಕ್ಕೆ ಹಣ ಹೊಂದಿಸಲು ಸಾಧ್ಯವಾಗಿಲ್ಲ. ಅದನ್ನು ಅರಿತ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮಣ ನಾಯಕ್ ಅವರೇ ₹ 1 ಲಕ್ಷ ಹಣ ನೀಡಿ ಸಹಾಯ ಮಾಡಿದ್ದಾರೆ. ಹನುಮಂತವ್ವ ಅವರಿಗೆ ವಾಸವಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.