ADVERTISEMENT

ಕಲಾಪ ಬಹಿಷ್ಕಾರ ಪರಿಹಾರವಲ್ಲ: ಎಸ್.ಟಿ.ಎಸ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 16:32 IST
Last Updated 7 ಡಿಸೆಂಬರ್ 2023, 16:32 IST
ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗದ ಎಇಇ ಗೀತಾ ಅವರಿಂದ ಶಾಸಕ ಎಸ್.ಟಿ.ಸೋಮಶೇಖರ್ ಮಾಹಿತಿ ಪಡೆದರು. 
ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗದ ಎಇಇ ಗೀತಾ ಅವರಿಂದ ಶಾಸಕ ಎಸ್.ಟಿ.ಸೋಮಶೇಖರ್ ಮಾಹಿತಿ ಪಡೆದರು.    

ಕೆಂಗೇರಿ: ಸರ್ಕಾರದ ಗಮನ ಸೆಳೆಯಲು ಹಲವಾರು ಮಾರ್ಗಗಳಿವೆ. ಕಲಾಪ ಬಹಿಷ್ಕಾರದಿಂದ ಯಾವುದೇ ಪರಿಹಾರ ದೊರಕುವುದಿಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು

ಯಶವಂತಪುರ ಕ್ಷೇತ್ರದ ಉಲ್ಲಾಳು ಕೆರೆ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಲಾಪ ನಡೆಸಲಾಗುತ್ತದೆ. ಅಲ್ಲಿ ಸಮಸ್ಯೆಗಳ ಬಗ್ಗೆ ಗಹನ ಚರ್ಚೆ ನಡೆಯಬೇಕಾಗಿದೆ. ಸರ್ಕಾರ ಹಾಗೂ ವಿರೋಧ ಪಕ್ಷಗಳು ತಮ್ಮ ನೀತಿ ನಿಲುವುಗಳನ್ನು ಪ್ರತಿಪಾದಿಸಬೇಕಾಗುತ್ತದೆ. ಇದನ್ನು ಮರೆತು ಬಹಿಷ್ಕಾರ ಮಾಡಲು ಮುಂದಾದರೆ ನನ್ನ ಸಹಮತ ಎಂದಿಗೂ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮುಖ್ಯಮಂತ್ರಿ ಅವರಿಂದ ₹ 10 ಸಾವಿರ ಕೋಟಿ ಅನುದಾನ ಘೋಷಣೆಯಾಗಿದೆ. ರೈತರ ಅಭ್ಯುದಯಕ್ಕೂ ಅನುದಾನ ಘೋಷಣೆ ಮಾಡುವಂತೆ ವಿರೋಧ ಪಕ್ಷಗಳು ಬೇಡಿಕೆ ಸಲ್ಲಿಸಬೇಕಾಗಿತ್ತು. ಮುಖ್ಯಮಂತ್ರಿಯವರಿಂದ ಸೂಕ್ತ ಸ್ಪಂದನೆ ದೊರಕದೇ ಇದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕು. ಎಲ್ಲ ವಿಷಯಕ್ಕೂ ಕಲಾಪ ಬಹಿಷ್ಕರಿಸಿ ಹೊರ ನಡೆಯುವುದು ಅಸಮಂಜಸ ಎಂದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳಿಗೂ ಮಹತ್ವವಿದೆ. ವಿರೋಧ ಪಕ್ಷ ನಾಯಕರು ಸದನದಲ್ಲಿ ಮಾತನಾಡಲು ಮುಕ್ತ ಆವಕಾಶ ಇರಬೇಕು. ರೈತ ಸಮಸ್ಯೆ, ಅಭಿವೃದ್ಧಿ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಮಯ ಕಲ್ಪಿಸಿಕೊಡಬೇಕು. ವಿರೋಧ ಪಕ್ಷ ನಾಯಕರ ಅಭಿವ್ಯಕ್ತಿಗೆ ತಡೆ ಹಾಕುವುದು ಸಂಸದೀಯ ನಡವಳಿಕೆ ಅಲ್ಲ ಎಂದು ಹೇಳಿದರು.

ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗದ ಎಇಇ ಗೀತಾ, ಮುಖಂಡರಾದ ಅನಿಲ್ ಕುಮಾರ್, ಸಬೀಹಾ, ಮಹೇಂದ್ರ ಕಿರಣ್  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.