ADVERTISEMENT

ಭೂ ರಹಿತರಿಗೆ ಭೂಮಿ ನೀಡುವ ಹೋರಾಟ ಬೇಕಿದೆ: ಪುರುಷೋತ್ತಮ ಬಿಳಿಮಲೆ

ಕೆಪಿಸಿಎಲ್ ವತಿಯಿಂದ ಅಂಬೇಡ್ಕರ್ ಜಯಂತಿ; ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ನೌಕರರ ಮಕ್ಕಳಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿಳಿಮಲೆ ಮತ್ತಿತರರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು</p></div>

ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿಳಿಮಲೆ ಮತ್ತಿತರರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು

   

ಬೆಂಗಳೂರು: ‘ಭೂ ರಹಿತರಿಗೆ ಭೂಮಿ ವಿತರಿಸುವ ಹೋರಾಟವನ್ನು ಮತ್ತೆ ಕಟ್ಟುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಾದವನ್ನು ಮುಂದುವರಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಈ ಹಿಂದೆ ಭೂ ರಹಿತರಿಗೆ ಭೂಮಿ ನೀಡುವ ಕೆಲಸ ನಡೆದಿತ್ತು. ಆದರೂ ಮತ್ತೆ ಜಮೀನು ಕ್ರೋಡೀಕರಣ
ವಾಗುತ್ತಿದೆ. ಹೀಗಾಗಿ ಮತ್ತೆ ಭೂ ರಹಿತರಿಗೆ ಭೂಮಿ ನೀಡುವ ಹೋರಾಟ ಕಟ್ಟುವ ಅನಿವಾರ್ಯ ಇದೆ. ಆ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಿದೆ’ ಎಂದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನ ಪೂರ್ಣ ಭಾರತೀಯ ಸಂವಿಧಾನ ಅಲ್ಲ ಎಂಬ ಕೂಗು ಈಗ ಬಲವಾಗುತ್ತಿದೆ. ಹೀಗೆ ಕೂಗುತ್ತಿರುವವರು ದೇಶದಲ್ಲಿ ಮನುಸ್ಮೃತಿಯನ್ನು ಮತ್ತೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಶ್ವದಲ್ಲಿ ಎಲ್ಲರನ್ನೂ ಸಮನಾಗಿ ಕಾಣುವ ಗ್ರಂಥವೆಂದರೆ ಅದು ಭಾರತೀಯ ಸಂವಿಧಾನ ಮಾತ್ರ. ಹೀಗಾಗಿ ಸಂವಿಧಾನವನ್ನು ಎತ್ತಿಹಿಡಿಯಬೇಕಾಗಿದೆ’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ಭಾರತಕ್ಕೆ ಸದಾ ಪ್ರಸ್ತುತವಾಗಿರುವುದು ಏಕೆ ಮತ್ತು ಅವರು ರಚಿಸಿದ ಸಂವಿಧಾನ ಏಕೆ ಶ್ರೇಷ್ಠ ಎಂಬುದರ ಕುರಿತು ಖ್ಯಾತ ನೇತ್ರ ತಜ್ಞ ಡಾ.ಎಚ್.ಆರ್.ಸುರೇಂದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೆಪಿಸಿಎಲ್‌ನ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಮಕ್ಕಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

ಕೆಪಿಸಿಎಲ್‌ನ ಮಾನವ ಸಂಪನ್ಮೂಲ ನಿರ್ದೇಶಕ ನಾಗರಾಜ ಸಿ., ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಆರ್.ಕೃಷ್ಣಮೂರ್ತಿ, ಪ್ರಧಾನ ವ್ಯವಸ್ಥಾಪಕರಾದ ಆಶಾ, ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಭೀಮಯ್ಯ ನಾಯ್ಕ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ಕುಮಾರ್, ಬೆಂಗಳೂರು ವಲಯದ ಅಧ್ಯಕ್ಷೆ ಶಿಲ್ಪಾ ಡಿ.ರಾಜು, ಕಾರ್ಯದರ್ಶಿ ಈರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.