ADVERTISEMENT

ಒಳಪಂಗಡದ ಹೆಸರಲ್ಲಿ ಗುರುತಿಸಿಕೊಳ್ಳದಿರಿ: ಬ್ರಾಹ್ಮಣರಿಗೆ ಸಚ್ಚಿದಾನಂದಮೂರ್ತಿ ಸಲಹೆ

ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಬ್ರಾಹ್ಮಣರಿಗೆ ಸಚ್ಚಿದಾನಂದ ಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:17 IST
Last Updated 30 ಜನವರಿ 2021, 19:17 IST
ಕಾರ್ಯಕ್ರಮದಲ್ಲಿ ಎಚ್.ಎಸ್.ಸಚ್ಚಿದಾನಂದಮೂರ್ತಿ ಮಾತನಾಡಿದರು. ಪ್ರಮೋದ್‌ ಮುತಾಲಿಕ್‌ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ಎಚ್.ಎಸ್.ಸಚ್ಚಿದಾನಂದಮೂರ್ತಿ ಮಾತನಾಡಿದರು. ಪ್ರಮೋದ್‌ ಮುತಾಲಿಕ್‌ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಇದ್ದರು.   

ಬೆಂಗಳೂರು:‘ಬ್ರಾಹ್ಮಣ ಸಮುದಾಯದವರು ಮಠಗಳ ಹಾಗೂ ಒಳಪಂಗಡಗಳನ್ನು ನಮೂದಿಸದೆ, ‘ಬ್ರಾಹ್ಮಣ’ ಎಂಬ ಒಂದೇ ಹೆಸರಿನಲ್ಲಿ ಗುರುತಿಸಿಕೊಳ್ಳಬೇಕು. ಈ ಮೂಲಕ ರಾಜಕೀಯ ಶಕ್ತಿಯಾಗಿ ಬ್ರಾಹ್ಮಣರು ಹೊರಹೊಮ್ಮಬೇಕು’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಸಲಹೆ ನೀಡಿದರು.

ಮಂಡಳಿಯ ವತಿಯಿಂದ ಮಲ್ಲೇಶ್ವರದ ಉಭಯ ವೇದಾಂತ ಭವನದಲ್ಲಿ ಹಮ್ಮಿಕೊಂಡಿದ್ದ ಒಳಪಂಗಡಗಳ ಪದಾಧಿಕಾರಿಗಳ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ರಾಹ್ಮಣರಲ್ಲಿ ಸಾಕಷ್ಟು ಮಂದಿ ಬಡವರು ಇದ್ದಾರೆ. ಆದರೆ, ಜನಗಣತಿಯಲ್ಲಿಒಳಪಂಗಡಗಳನ್ನು ನಮೂದಿಸಿರುವುದರಿಂದ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯುವುದು ಕಷ್ಟ.ಒಳಪಂಗಡಗಳನ್ನು ನಮೂದಿಸಿದರೆ, ಅದು ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ’ ಎಂದು ಎಚ್ಚರಿಸಿದರು.

ADVERTISEMENT

‘ಈಗೆಲ್ಲಾ ಮತ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ. ಬ್ರಾಹ್ಮಣರೂ ಒಗ್ಗಟ್ಟಾಗಬೇಕು. ಸಂಸ್ಕಾರದ ಕೊರತೆಯಿಂದ ಬ್ರಾಹ್ಮಣತ್ವ ನಶಿಸುತ್ತಿದೆ. ಯಾವ ಗುರುಗಳನ್ನೂ ನಿಂದಿಸಬಾರದು.ಆಚಾರ್ಯತ್ರಯರು ಎಲ್ಲರೂ ಒಂದೇ’ ಎಂದರು.

‘ಕೇಂದ್ರ ಸರ್ಕಾರ ನೀಡಿರುವ ಶೇ 10ರ ಮೀಸಲಾತಿಯನ್ನು ಸಮುದಾಯಕ್ಕೆ ಜಾರಿ ಮಾಡಲು ಈಗಾಗಲೇ ಪ್ರಯತ್ನ ನಡೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌,‘ 40 ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಇದ್ದು, ಹಿಂದೂ ಸಂಸ್ಕಾರ ಮನೋಭಾವ ಹೊಂದಿರುವ ನಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲು ಮಾನಸಿಕ ಗೊಂದಲದಲ್ಲಿದ್ದೇವೆ. ಆದರೆ, ಬ್ರಾಹ್ಮಣ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ’ ಎಂದರು.

‘ಸರ್ಕಾರ ಶಂಕರಾಚಾರ್ಯರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಅದೇ ಮಾದರಿ ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರ ಜಯಂತಿಗಳನ್ನೂ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಮಂಡಳಿಯ ನಿರ್ದೇಶಕರಾದ ಪವನ್ ಕುಮಾರ್, ಸುಬ್ಬರಾಯ ಹೆಗಡೆ, ವತ್ಸಲಾ ನಾಗೇಂದ್ರ, ಪುರುಷೋತ್ತಮ್, ಛಾಯಾಪತಿ, ರಂಗವಿಠಲ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.