ಸಮ್ಮೇಳನದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮತ್ತು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಉಪಸ್ಥಿತರಿದ್ದಾರೆ
ಪ್ರಜಾವಾಣಿ ಚಿತ್ರ
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವೈಜ್ಞಾನಿಕವಾಗಿ ನಡೆದಿಲ್ಲ. ಬ್ರಾಹ್ಮಣರ ಮನೆಗಳಿಗೆ ಭೇಟಿ ನೀಡದೆಯೇ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಆದ್ದರಿಂದ ಬ್ರಾಹ್ಮಣರ ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂದು ಬ್ರಾಹ್ಮಣ ಮಹಾ ಸಮ್ಮೇಳನ ಒತ್ತಾಯಿಸಿದೆ.
ಇದು, ಸೇರಿದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಮಹೋತ್ಸವದ ಪ್ರಯುಕ್ತ ಇಲ್ಲಿ ಏರ್ಪಡಿಸಿದ್ದ ಸಮ್ಮೇಳನದ ಕಡೆಯ ದಿನವಾದ ಭಾನುವಾರ ಐದು ನಿರ್ಣಯ ತೆಗೆದುಕೊಳ್ಳಲಾಯಿತು. ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ನಿರ್ಣಯಗಳನ್ನು ಮಂಡಿಸಿದರು.
‘ಬ್ರಾಹ್ಮಣ ಸಮುದಾಯದವರ ಮನೆಗಳಿಗೆ ಭೇಟಿ ನೀಡದಿದ್ದರೂ, ಜಾತಿಗಣತಿ ನಡೆದಿದೆ ಎನ್ನುವುದು ಸೂಕ್ತವಲ್ಲ. ಜಾತಿಗಣತಿಯನ್ನು ಇನ್ನೊಂದು ಸಾರಿ ವೈಜ್ಞಾನಿಕವಾಗಿ ಮಾಡಬೇಕು. ಸದ್ಯ ಮಾಡಿರುವ ಜಾತಿ ಗಣತಿಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಕೇಂದ್ರ ಸರ್ಕಾರ ನೀಡಿರುವ ಶೇ 10ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು. ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಬೇಕು. ಅಲ್ಪಸಂಖ್ಯಾತರ ಧಾರ್ಮಿಕ ಕ್ಷೇತ್ರಗಳಲ್ಲಿ ಮತ ಪ್ರಚಾರವಾಗುವಂತೆ, ಮುಜರಾಯಿ ದೇಗುಲಗಳು ಸನಾತನ ಧರ್ಮದ ಕೇಂದ್ರ ಆಗಬೇಕು. ದೇವಸ್ಥಾನಗಳಿಗೆ ಸೇರಿದ ಇನಾಮು ಜಮೀನು ಸರ್ಕಾರ ವಹಿಸಿಕೊಂಡಿದ್ದು, ಯಾರಿಗೂ ವಿತರಣೆ ಆಗದ ಜಮೀನನ್ನು ದೇಗುಲದ ಸುಪರ್ದಿಗೆ ಹಿಂತಿರುಗಿಸಿ ಕೊಡಬೇಕು. ಮಹಾಸಭೆಯ ಸುವರ್ಣ ಭವನಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡಬೇಕು’ ಎಂದು ಆಗ್ರಹಿಸಲಾಯಿತು.
ಇದಕ್ಕೂ ಮೊದಲು ನಡೆದ ಧರ್ಮ ಸಭೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ಪಾಲ್ಗೊಂಡ ಕಂಚಿ ಕಾಮಕೋಟಿ ಸರ್ವಜ್ಞ ಪೀಠದ ಶಂಕರವಿಜಯೇಂದ್ರ ಸರಸ್ವತಿ ಸ್ವಾಮೀಜಿ, ‘ದೇಶದಲ್ಲಿ ಧರ್ಮ ಪ್ರಚಾರ ಕಾರ್ಯದಲ್ಲಿ ಬ್ರಾಹ್ಮಣರು ಮುಂಚೂಣಿಯಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬ್ರಾಹ್ಮಣರ ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕ ಪ್ರಗತಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ವ್ಯಾಸರಾಜ ಮಠದ (ಸೋಸಲೆ) ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಶಾರದಾ ಮಠದ ಅಭಿನವ ಶಂಕರಭಾರತಿ ಸ್ವಾಮೀಜಿ, ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಮುಳಬಾಗಿಲಿನ ಶ್ರೀಪಾದರಾಜ ಮಠದ ಸುಜಯನಿಧಿತೀರ್ಥ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಅಧ್ಯಕ್ಷತೆ ವಹಿಸಿದ್ದರು.
ಇತಿಹಾಸದ ಪುಟ ತಿರುವಿದರೆ ಬ್ರಾಹ್ಮಣರು ದೇಶಕ್ಕೆ ನೀಡಿದ ಕೊಡುಗೆಗಳು ತಿಳಿಯಲಿವೆ. ಎಲ್ಲ ಸಮುದಾಯವನ್ನು ಪ್ರೀತಿಸುತ್ತಾ ಗೌರವಿಸುತ್ತಾ ಹೆಜ್ಜೆ ಹಾಕಬೇಕು.–ಕೃಷ್ಣ ಎಸ್. ದೀಕ್ಷಿತ್, ಹೈಕೋರ್ಟ್ ನ್ಯಾಯಮೂರ್ತಿ
ಬ್ರಾಹ್ಮಣ ಎನ್ನುವುದು ಜಾತಿ ಸೂಚಕ ಪದವಾಗಿರದೆ ವರ್ಣ ಸೂಚಕ ಪದವಾಗಿದೆ. ಶಾಸ್ತ್ರ ವಾಕ್ಯಕ್ಕೆ ವಿರುದ್ಧವಾದದ್ದು ಜಾತಿ. ಆದ್ದರಿಂದ ಜಾತಿ ಬದಲು ಸಮುದಾಯವೆಂದು ಗುರುತಿಸಿಕೊಳ್ಳಿ.–ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.