ADVERTISEMENT

ಮಿದುಳು ನಿಷ್ಕ್ರಿಯ: ನಾಲ್ವರಿಗೆ ನೆರವಾದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:50 IST
Last Updated 26 ಮಾರ್ಚ್ 2022, 19:50 IST

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ 38 ವರ್ಷದ ವ್ಯಕ್ತಿಯೊಬ್ಬರು ಅಂಗಾಂಗಗಳ ದಾನದ ಮೂಲಕ ನಾಲ್ವರಿಗೆ ನೆರವಾಗಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯ ವ್ಯಕ್ತಿ, ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ನಗರದ ಆಸ್ಟರ್ ಆರ್‌.ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮಿತಿಸಿದರು.

ಅವರ ಹೃದಯವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿನ ನಾರಾಯಣ ಹೃದಯ ಕೇಂದ್ರದಲ್ಲಿ 50 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಕಸಿ ನಡೆಸಲಾಗಿದೆ. ಇನ್ನೊಂದು ಮೂತ್ರಪಿಂಡವನ್ನು ಎನ್‌ಯು ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಚರ್ಮವನ್ನು ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕಿಗೆ ಹಾಗೂ ಕಣ್ಣುಗಳನ್ನು (ಕಾರ್ನಿಯಾ) ಮಿಂಟೊ ಕಣ್ಣಿನ ಬ್ಯಾಂಕ್‌ಗೆ ನೀಡಲಾಗಿದೆ.

ADVERTISEMENT

ವ್ಯಕ್ತಿಯ ಹೃದಯವನ್ನು ಜಯನಗರದ ಆರ್‌ವಿ ಆಸ್ಪತ್ರೆಯಿಂದ ಹಸಿರು ಕಾರಿಡಾರ್ ಮೂಲಕ ಎಂ.ಎಸ್. ರಾಮ್ಯಯ ಆಸ್ಪತ್ರೆಗೆ 20 ನಿಮಿಷಗಳಲ್ಲಿ ಸಾಗಿಸಲಾಯಿತು. ಹೃದಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ಮೂರು ಗಂಟೆಯ ಅವಧಿಯಲ್ಲಿ ಕಸಿ ನಡೆಸಲಾಗಿದೆ. ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಎರಡು ತಿಂಗಳ ಹಿಂದೆ ಹೃದಯಾಘಾತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.