ADVERTISEMENT

ಬ್ರ್ಯಾಂಡ್ ಬೆಂಗಳೂರು | ವಿಮಾನ ನಿಲ್ದಾಣ: ರೈಲು ನಿಲುಗಡೆ ತಾಣ ಭಣ ಭಣ

ರೈಲು ಹತ್ತಲು ವಿಮಾನ ಪ್ರಯಾಣಿಕರ ನಿರಾಸಕ್ತಿ l ಲಗೇಜುಗಳನ್ನು ಹೊತ್ತು 3– 4 ವಾಹನ ಏರುವ ತಾಪತ್ರಯ l ದಿನಕ್ಕೆ ಎರಡೇ ರೈಲು ಸಂಚಾರ

ವಿಜಯಕುಮಾರ್ ಎಸ್.ಕೆ.
Published 13 ಡಿಸೆಂಬರ್ 2021, 22:04 IST
Last Updated 13 ಡಿಸೆಂಬರ್ 2021, 22:04 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ರೈಲು ನಿಲುಗಡೆ ತಾಣ –ಪ್ರಜಾವಾಣಿ ಚಿತ್ರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ರೈಲು ನಿಲುಗಡೆ ತಾಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅತೀ ಕಡಿಮೆ ದರ ಮತ್ತು ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಸೌಕರ್ಯ ಕಲ್ಪಿಸಲು ನಿರ್ಮಾಣ ಮಾಡಿದ ರೈಲು ನಿಲುಗಡೆ ತಾಣ ಪ್ರಯಾಣಿಕರಿಲ್ಲದೆ ಭಣಗುಡುತ್ತಿದೆ. ಕೆಲವೊಂದು ಸೇವಾ ನ್ಯೂನತೆಗಳಿಂದಾಗಿ ಪ್ರಯಾಣಿಕರು ಈ ಸೌಕರ್ಯ ಬಳಕೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ತಾಣವೀಗ ಉಪಯೋಗಕ್ಕೆ ಬಾರದಂತಾಗಿದೆ.

ದೇವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ‌ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಬಳ್ಳಾರಿ ರಸ್ತೆಯಲ್ಲಿ ಸಂಚಾರದ ದಟ್ಟಣೆ ಬಗೆಹರಿಯದ ಸಮಸ್ಯೆಯಾಗಿದೆ. ವಿಮಾನ ಪ್ರಯಾಣಿಕರು, ವಿಮಾನ ನಿಲ್ದಾಣ ಮತ್ತು ಕಾರ್ಗೊ ಟರ್ಮಿನಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿ ನಿತ್ಯ ಸರಾಸರಿ 1.30 ಲಕ್ಷ ಜನ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ. ಇವರೆಲ್ಲರೂ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಈ ನಡುವೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ರನ್‌ವೇ ಸಿದ್ಧಗೊಳ್ಳುತ್ತಿದೆ. ಇಲ್ಲಿಗೆ ಬಂದು ಹೋಗುವ ವಿಮಾನಗಳ ಸಂಖ್ಯೆ, ಪ್ರಯಾಣಿಕರ ಸಂಖ್ಯೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಾಗಲಿವೆ. ಆದರೆ, ಸಂಚಾರ ದಟ್ಟಣೆ ಸೀಳಿಕೊಂಡು ಬೆಂಗಳೂರಿನಿಂದ ವಿಮಾನ ನಿಲ್ದಾಣ ತಲುಪುವುದೇ ಸಾಹಸದ ಕೆಲಸ. ಬಿಎಂಟಿಸಿ ಬಸ್‌ಗಳು ಅಥವಾ ಕ್ಯಾಬ್‌ಗಳಲ್ಲಿ ದುಬಾರಿ ದರ ಪಾವತಿಸಿ ಪ್ರಯಾಣಿಸಬೇಕಾದ ಸ್ಥಿತಿ ಇದೆ.

ADVERTISEMENT

ಈ ಸಮಸ್ಯೆಗೆ ಪರಿಹಾರ ಆಗಲಿದೆ ಎಂಬ ನಿರೀಕ್ಷೆಯಲ್ಲಿ ರೈಲು ನಿಲುಗಡೆ ತಾಣವನ್ನು ವಿಮಾನ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿತ್ತು. ₹10 ರಿಂದ ₹15 ವೆಚ್ಚದಲ್ಲಿ ನಗರದಿಂದ ವಿಮಾನ ನಿಲ್ದಾಣ ತಲುಪಬಹುದಾದ ರೈಲು ಸೌಕರ್ಯವನ್ನು ನೈರುತ್ಯ ರೈಲ್ವೆ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಸೇರಿ ನಿರ್ಮಿಸಿದ್ದವು.

‘ಬೆಂಗಳೂರು–ದೇವನಹಳ್ಳಿ ನಡುವೆ ವಿಮಾಣ ನಿಲ್ದಾಣದ ಮಗ್ಗುಲಿನಲ್ಲೇ ಹಾದು ಹೋಗುವ ರೈಲು ಮಾರ್ಗದಲ್ಲಿ 2021ರ ಜ.4ರಿಂದ ಈ ನಿಲುಗಡೆ ತಾಣ ಕಾರ್ಯಾಚರಿಸುತ್ತಿದೆ. ಆರಂಭದ ಒಂದೆರಡು ದಿನ ರೈಲು ಸೇವೆಯನ್ನು ಬಳಸಿಕೊಂಡ ಪ್ರಯಾಣಿಕರು, ಈಗ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಒಬ್ಬ ಪ್ರಯಾಣಿಕರೂ ಇಲ್ಲದ ಮತ್ತು ಇಡೀ ರೈಲಿನಲ್ಲಿ ಒಬ್ಬ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ಮಾಡಿರುವ ಉದಾಹರಣೆಗಳೂ ಇವೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕವೂ ರೈಲು ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿಲ್ಲ. ಪ್ರಯಾಣಿಕರ ಕೊರತೆ ಇರುವುದರಿಂದ ಸದ್ಯ ಎರಡು ರೈಲುಗಳು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಿವೆ.

‘ಸಮಯಕ್ಕೆ ಸರಿಯಾಗಿ ತಲುಪುವ ಖಾತ್ರಿ ಇಲ್ಲ’
ರೈಲು ಪ್ರಯಾಣಕ್ಕೆ ಜನ ಆಸಕ್ತಿ ತೋರಿಸದಿರಲು ಹಲವು ಕಾರಣಗಳಿವೆ. ಮನೆಯಿಂದ ರೈಲು ನಿಲ್ದಾಣಗಳಿಗೆ ಬೇರೆ ವಾಹನಗಳಲ್ಲಿ ಹೋಗಬೇಕು. ತಮ್ಮ ಬ್ಯಾಗ್‌ಗಳನ್ನು ಹೊತ್ತು ಪ್ಲಾಟ್‌ಫಾರಂಗೆ ಹೋಗಬೇಕು. ನಿರ್ದಿಷ್ಟ ಸಮಯಕ್ಕೆ ರೈಲು ಬರುವ ಖಾತ್ರಿ ಇಲ್ಲ. ರೈಲು ಬರುವುದು ವಿಳಂಬವಾಗಿ ವಿಮಾನ ನಿಲ್ದಾಣಕ್ಕೆ ಹೋಗುವುದು ತಡವಾದರೆ ಆಗಲಿರುವ ತೊಂದರೆಯನ್ನೂ ಪ್ರಯಾಣಿಕರು ಲೆಕ್ಕಾಚಾರ ಮಾಡುತ್ತಾರೆ.

‘ಸಮಯಕ್ಕೆ ಸರಿಯಾಗಿ ರೈಲು ಬಂದರೂ ರೈಲು ಇಳಿದ ಕೂಡಲೇ ವಿಮಾನ ನಿಲ್ದಾಣದೊಳಗೆ ಹೋಗುವ ಅವಕಾಶ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಲು ಬಿಐಎಎಲ್ ವ್ಯವಸ್ಥೆ ಮಾಡಿರುವ ಬಸ್‌ಗಳನ್ನು ಬಳಸಬೇಕು. ತಮ್ಮ ಸರಕು– ಸರಂಜಾಮುಗಳನ್ನು ಹೊತ್ತು ಮೂರ್ನಾಲ್ಕು ಬಾರಿ ಬಸ್ ಮತ್ತು ರೈಲು ಹತ್ತಿ–ಇಳಿಯುವಷ್ಟು ತಾಳ್ಮೆ ಮತ್ತು ಶ್ರಮ ವಹಿಸಲು ಪ್ರಯಾಣಿಕರು ಬಯಸುವುದಿಲ್ಲ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್.

‘ವಿಮಾನ ಪ್ರಯಾಣದಿಂದ ಆಯಾಸ ಆಗಿದ್ದವರು ಬೇಗ ಮನೆ ಸೇರಿಕೊಳ್ಳಬೇಕು ಎಂದು ಬಯಸುತ್ತಾರೆ. ಸುತ್ತು ಬಳಸು ಹಾದಿಯನ್ನು ಯಾರೂ ಒಪ್ಪುವುದಿಲ್ಲ. ಆದ್ದರಿಂದ ರೈಲು ಪ್ರಯಾಣಕ್ಕೆ ಜನ ಆಸಕ್ತಿ ತೋರಿಸುತ್ತಿಲ್ಲ’ ಎನ್ನುತ್ತಾರೆ ಅವರು.

ವಿಮಾನ ನಿಲ್ದಾಣಕ್ಕೆ ಬರುವ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಬೇಕಿರುವುದರಿಂದ ರೈಲು ನಿಲ್ದಾಣಕ್ಕೆ ಹೋಗಿ ಕಾದು ಕುಳಿತುಕೊಳ್ಳುವಷ್ಟು ತಾಳ್ಮೆ ಇರುವುದಿಲ್ಲ. ಆದ್ದರಿಂದಲೇ ಸಿಬ್ಬಂದಿ ಕೂಡ ರೈಲು ಪ್ರಯಾಣ ಬಳಸುತ್ತಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.

‘ವಿಮಾನ ನಿಲ್ದಾಣಕ್ಕೇ ಮೀಸಲಾದ ಪ್ರತ್ಯೇಕ ಮಾರ್ಗ ನಿರ್ಮಾಣವಾಗಬೇಕು. ರೈಲು ಇಳಿದು ಬಸ್ ಹತ್ತಿ ಹೋಗುವ ವ್ಯವಸ್ಥೆ ಇರಬಾರದು. ಈಗಿರುವ ಮಾರ್ಗವನ್ನು ವಿದ್ಯುತ್ ಆಧಾರಿತ ಜೋಡಿ ಮಾರ್ಗವಾಗಿ ಪರಿವರ್ತಿಸಬೇಕು. ಮೆಟ್ರೊ ರೈಲಿನಂತೆ ಕ್ಷಣ ಕ್ಷಣಕ್ಕೂ ರೈಲುಗಳ ವ್ಯವಸ್ಥೆ ಕಲ್ಪಿಸಬೇಕು. ಉಪನಗರ ರೈಲು ಯೋಜನೆಯಲ್ಲಿ ಈ ಮಾರ್ಗವನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ಅವರು ಸಲಹೆ ನೀಡಿದರು.

ಸಮಯ ಪರಿಪಾಲನೆ ಮಾಡಿ: ಸಲಹೆ
ಪ್ರಯಾಣಿಕರನ್ನು ಸೆಳೆಯಲು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಒಟ್ಟಾಗಿ ಕಾರ್ಯತಂತ್ರ ರೂಪಿಸಬೇಕು ಎಂಬುದು ರೈಲ್ವೆ ಹೋರಾಟಗಾರರ ಸಲಹೆ.

ರೈಲು ಹೊರಡುವ ಮತ್ತು ತಲುಪುವ ಸಮಯ ಮತ್ತು ನಿಲ್ದಾಣವನ್ನು ಆಗಾಗ ಬದಲಿಸಬಾರದು. ಆಗ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಬಹುದು ಎನ್ನುತ್ತಾರೆ. ‘ವಿಮಾನ ನಿಲ್ದಾಣ ಸಿಬ್ಬಂದಿಗೆ ಮಾಸಿಕ ಪಾಸ್ ವಿತರಣೆ ಬಗ್ಗೆ ಆಲೋಚಿಸಬೇಕು. ಆದರೆ, ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕಿರುವ ಕಾರಣ ಯಾವುದೇ ಕಾರಣಕ್ಕೂ ಪ್ರಯಾಣ ವಿಳಂಬ ಆಗದಂತೆ ಸಮಯ ಪರಿಪಾಲನೆ ಮಾಡಬೇಕು. ಸಂಪೂರ್ಣ ಮಾರ್ಗವನ್ನು ವಿದ್ಯುದೀಕರಣಗೊಳಿಸಿ ಮೈಸೂರು, ಹೊಸೂರು, ವೈಟ್‌ಫೀಲ್ಡ್, ತುಮಕೂರು, ಕೆಎಸ್‌ಆರ್‌ ರೈಲು ನಿಲ್ದಾಣ, ಯಶವಂತಪುರ ನಿಲ್ದಾಣಗಳಿಂದಲೂ ಮೆಮು ರೈಲುಗಳ ಸಂಚಾರ ಆರಂಭಿಸಬೇಕು. ಅದರಲ್ಲಿ ಹವಾನಿಯಂತ್ರಿತ ಬೋಗಿಗಳೂ ಇರುವಂತೆ ನೋಡಿಕೊಳ್ಳಬೇಕು’ ಎಂಬುದು ಅವರ ಸಲಹೆ.

‘ವಿಶ್ವಾಸಾರ್ಹತೆ ಮೂಡಿಸಬೇಕು’
‘ರೈಲಿನಲ್ಲಿ ಹೋದರೆ ಸಮಯಕ್ಕೆ ಸರಿಯಾಗಿ ತಲುಪುತ್ತೇನೆ ಎಂಬ ವಿಶ್ವಾಸಾರ್ಹತೆಯನ್ನು ರೈಲ್ವೆ ಇಲಾಖೆ ಜನರಲ್ಲಿ ಮೂಡಿಸಬೇಕಿದೆ’ ಎಂದು ರೈಲ್ವೆ ಹೋರಾಟಗಾರ ಅಭಿಷೇಕ್ ಹೇಳಿದರು.

ನಗರದ ರೈಲು ನಿಲ್ದಾಣ ಮಾತ್ರವಲ್ಲ ಮೈಸೂರಿನಿಂದ ನಗರಕ್ಕೆ ಬರುವ ರೈಲೂ ವಿಮಾನ ನಿಲ್ದಾಣದವರೆಗೆ ಹೋಗಿ ಬರುವ ವ್ಯವಸ್ಥೆ ಮಾಡಬೇಕು. ವಿಮಾನ ನಿಲ್ದಾಣದಲ್ಲಿ ರೈಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.