ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಬಿಬಿಎಂಪಿ, ಬಿಡಿಎ ಹಾಗೂ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸೌಂದರ್ಯೀಕರಣಕ್ಕೆ ಅಗತ್ಯವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಬಿಎಂಪಿ, ಬಿಎಂಆರ್‌ಸಿಎಲ್, ಬಿಡಿಎ ನಿರ್ವಹಿಸುತ್ತಿರುವ ಕಾಮಗಾರಿಗಳನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ಮೂರೂ ಸಂಸ್ಥೆಗಳು ಪರಸ್ಪರ ಸಹಯೋಗದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲು ಜವಾಬ್ದಾರಿ ವಹಿಸಲಾಗಿದೆ’ ಎಂದರು.
‘ನಮ್ಮ ಮೆಟ್ರೊದ ಹೊಸ ಯೋಜನೆಗಳಲ್ಲಿ ಸುಮಾರು 40 ಕಿ.ಮೀ. ಉದ್ದದ ಡಬಲ್ ಡೆಕರ್ ನಿರ್ಮಾಣ ಮಾಡಲಾಗುವುದು. ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಸಾಧ್ಯವಿಲ್ಲದ್ದರಿಂದ, ಮುಂದೆ ನಿರ್ಮಾಣವಾಗುವ ನಮ್ಮ ಮೆಟ್ರೊ ಮಾರ್ಗದಲ್ಲಿ ಡಬಲ್ ಡೆಕರ್ ಕಡ್ಡಾಯಗೊಳಿಸಲಾಗಿದೆ. ಇದರ ವೆಚ್ಚವನ್ನು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಸಮನಾಗಿ ಭರಿಸಲಿವೆ. ಇದೀಗ ಉದ್ದೇಶಿಸಿರುವ ಡಬಲ್ ಡೆಕರ್‌ಗೆ ₹9,800 ಕೋಟಿ ವೆಚ್ಚವಾಗಲಿದೆ’ ಎಂದು ತಿಳಿಸಿದರು.
‘ರಾಗಿಗುಡ್ಡದಲ್ಲಿ ನಿರ್ಮಿಸಲಾಗಿರುವ ಡಬಲ್ ಡೆಕರ್‌ನಲ್ಲಿ ಕೆಲವು ಸಮಸ್ಯೆಗಳಿವೆ. ಮುಂದಿನ ದಿನಗಳಲ್ಲಿ ಸುಧಾರಣೆ ಮಾಡಿಕೊಳ್ಳಲಾಗುತ್ತದೆ. ಮುಂದಿನ 30ರಿಂದ 40 ವರ್ಷವನ್ನು ಗುರಿಯಾಗಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದರು.
ಜಾಹೀರಾತಿಗೆ ಅವಕಾಶ: ನಮ್ಮ ಮೆಟ್ರೊ ಪಿಲ್ಲರ್‌ಗಳ ಮೇಲೆ ಜಾಹೀರಾತು ಪ್ರಕಟಣೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿ 50:50ರ ಅನುಪಾತದಲ್ಲಿ ಆದಾಯವನ್ನು ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಕಡೆಯ ರಸ್ತೆ, ಲೊಟ್ಟೆಗೊಲ್ಲಹಳ್ಳಿ, ಸುಮನಹಳ್ಳಿ ಭಾಗದಲ್ಲಿ ನಮ್ಮ ಮೆಟ್ರೊ, ಅಂಡರ್‌ಪಾಸ್, ಮೇಲ್ಸೇತುವೆ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ಧಾರೆ. ತಾಂತ್ರಿಕ ಸಿಬ್ಬಂದಿಯೊಂದಿಗೆ ನಗರ ಪ್ರದಕ್ಷಿಣೆ ಮಾಡಿ, ಭೂಸ್ವಾಧೀನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು ಎಂದು ಹೇಳಿದರು.
ಹೆಬ್ಬಾಳ ಮೇಲ್ಸೇತುವೆಯಲ್ಲಿ ಹೊಸ ಲೂಪ್ ನಿರ್ಮಾಣ ಏಪ್ರಿಲ್ ಅಂತ್ಯಕ್ಕೆ ಮುಗಿಯಲಿದೆ ಎಂದು ಬಿಡಿಎ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮೇ ಮೊದಲ ವಾರದಲ್ಲಿ ವಾಹನ ಸಂಚಾರ ಆರಂಭವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ತುಮಕೂರಿನಿಂದ ಕೆ.ಆರ್. ಪುರಕ್ಕೆ ಹೋಗುವ ರಸ್ತೆ ಬಳಿ ಸಂಚಾರ ದಟ್ಟಣೆ ತಪ್ಪಿಸಲು ಅಂಡರ್ ಪಾಸ್ ನಿರ್ಮಾಣಕ್ಕೆ ಬಿಡಿಎ, ಮೆಟ್ರೊ, ಬಿಬಿಎಂಪಿ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಲು ತಿಳಿಸಲಾಗಿದೆ. ಈ ಕಾಮಗಾರಿಯನ್ನು ಬಿಡಿಎ ನಿರ್ವಹಿಸಲಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರೊಂದಿಗೆ ಶುಕ್ರವಾರ ನಡೆಯುವ ಸಭೆಯಲ್ಲಿ ಬಜೆಟ್‌ನಲ್ಲಿ ನಗರದ ಯೋಜನೆಗಳಿಗೆ ಬೇಕಾದ ಅನುದಾನದ ಕೋರಿ ಮನವಿ ಸಲ್ಲಿಸಲಾಗುತ್ತದೆ ಎಂದರು.
‘ವ್ಯವಸ್ಥಿತ ನಗರ ಮಾಡುವ ಗುರಿ’
‘ಬೆಂಗಳೂರನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಆದ್ದರಿಂದ ಇನ್ನೂ ವ್ಯವಸ್ಥಿತ ನಗರವನ್ನಾಗಿ ಮಾಡುವುದೇ ನನ್ನ ಗುರಿ. ಎಲ್ಲೆಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದೋ ಅಲ್ಲೆಲ್ಲ ಯೋಜನೆ ಅನುಷ್ಠಾನಗೊಳಿಸುವುದು ನನ್ನ ಗುರಿ. ಭವಿಷ್ಯದ ಬೆಂಗಳೂರು ಉತ್ತಮವಾಗಿರಬೇಕು ಎಂಬುದು ನನ್ನ ಕನಸು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸುರಂಗ ರಸ್ತೆಯ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಯಾವುದೇ ಟೀಕೆಗಳು ಇಲ್ಲದೇ ನೀವು ಬೆಳೆಯಲು ಸಾಧ್ಯವಿಲ್ಲ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ’ ಎಂದರು. ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಅದನ್ನು ಪರಿಶೀಲಿಸಲು ಜಂಟಿ ಸದನ ಸಮಿತಿ ರಚಿಸಲಾಗಿದ್ದು ಅದರ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ನಗರದ ಎಲ್ಲ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ನಾಗರಿಕರಿಂದಲೂ ಸಲಹೆ ಪಡೆಯುತ್ತಿದ್ದಾರೆ. ವರದಿ ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಮೆಟ್ರೊ ಪ್ರಯಾಣ ದರ: ಸರ್ಕಾರ ಹಸ್ತಕ್ಷೇಪ ಇಲ್ಲ’
‘ನಮ್ಮ ಮೆಟ್ರೊ ಪ್ರಯಾಣ ದರ ಹೆಚ್ಚಳದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಅದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದೆ. ಆ ಸಮಿತಿಯ ವರದಿಯಂತೆ ಬಿಎಂಆರ್‌ಸಿಎಲ್ ತೀರ್ಮಾನ ಮಾಡುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಸಮಿತಿ ವರದಿ ನೀಡಿದ ಬಳಿಕ ನಮ್ಮ ಸರ್ಕಾರ ಮೂಗು ತೂರಿಸುವುದಿಲ್ಲ. ಪ್ರಯಾಣ ದರ ಹೆಚ್ಚಳದ ಬಗ್ಗೆ ನಿಗಮದ ನಿರ್ಧಾರವೇ ಅಂತಿಮ’ ಎಂದರು.
‘ನಗರದಲ್ಲಿ ಜಲಮಂಡಳಿಯಿಂದ ಪೂರೈಕೆಯಾಗುವ ನೀರಿನ ದರ ಹೆಚ್ಚಳದ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. 14 ವರ್ಷದಿಂದ ನೀರಿನ ದರ ಹೆಚ್ಚಳವಾಗಿಲ್ಲ. ಜಲಮಂಡಳಿಗೆ ವರ್ಷಕ್ಕೆ ₹1000 ಕೋಟಿ ನಷ್ಟವಾಗುತ್ತಿದೆ. ದರ ಏರಿಕೆ ಸಂಬಂಧ ನೀಡಲಾಗಿರುವ ವರದಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.