ADVERTISEMENT

ಲಂಚ ಪ್ರಕರಣ: ಬಿಬಿಎಂಪಿ ತೆರಿಗೆ ನಿರೀಕ್ಷಕನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 16:52 IST
Last Updated 12 ಏಪ್ರಿಲ್ 2022, 16:52 IST
   

ಬೆಂಗಳೂರು: 2017ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಖಲಿಸಿದ್ದ ಪ್ರಕರಣದಲ್ಲಿ ಬಿಬಿಎಂಪಿಯ ಚಿಕ್ಕಪೇಟೆ ವಾರ್ಡ್‌ನ ತೆರಿಗೆ ನಿರೀಕ್ಷಕ ನಾಗೇಂದ್ರ ಅಪರಾಧಿ ಎಂದು ಸಾರಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ, ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 40,000 ದಂಡ ವಿಧಿಸಿದೆ.

ನಾಗೇಂದ್ರ 2017ರಲ್ಲಿ ಬಿಬಿಎಂಪಿಯ ಬೇಗೂರು ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ತೆರಿಗೆ ನಿರೀಕ್ಷಕರಾಗಿದ್ದರು. ಆಗ, ಅಲ್ಲಿನ ನಿವಾಸಿಯೊಬ್ಬರು ತಮ್ಮ ಸ್ಥಿರಾಸ್ತಿಯ ಬಿ– ಖಾತಾ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಆಗ, ಅಪರಾಧಿಯು ₹ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.

₹ 20,000 ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ 2018ರ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ‘ಲಂಚ ಪ್ರಕರಣದಲ್ಲಿ ನಾಗೇಂದ್ರ ದೋಷಿ’ ಎಂಬ ತೀರ್ಮಾನ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.