ADVERTISEMENT

ಕೋವಿಡ್‌-19 ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ: ಪ್ರತಿ 10ಲಕ್ಷಕ್ಕೆ 7,100 ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 9:16 IST
Last Updated 15 ಜೂನ್ 2020, 9:16 IST
   

ಬೆಂಗಳೂರು:ಲಾಕ್‌ಡೌನ್‌ ಬಳಿಕ ಕೋವಿಡ್-19‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಕೋವಿಡ್-19‌ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಅವರು ಈ ವಿಷಯ ತಿಳಿಸಿದರು.

ನಗರದಲ್ಲಿ ಒಟ್ಟು 697 ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 330 ಸಕ್ರಿಯ ಪ್ರಕರಣಗಳಿದ್ದು, 6 ಜನ ವಿಶೇಷ ನಿಗಾ ಘಟಕದಲ್ಲಿ ಇದ್ದಾರೆ ಎಂದರು.

ADVERTISEMENT

ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಕ್ವಾರಂಟೈನ್, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನ ಕ್ವಾರಂಟೈನ್ ಮಾಡಲಾಗುವುದು. ಮಾಸ್ಕ್ ಧರಿಸದ ವ್ಯಕ್ತಿಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ₹ 200 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ 8,000 ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ಗಳನ್ನು ರಚಿಸಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು, ಹೋಂ ಕ್ವಾರಂಟೈನ್ ಪಾಲನೆಯನ್ನು ಖಾತರಿ ಪಡಿಸುವ ಬಗ್ಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ಒಟ್ಟು 2956 ಸಕ್ರಿಯ ಪ್ರಕರಣಗಳು ಇದ್ದು, 93 ಶೇಕಡಾ ಜನರಿಗೆ ರೋಗ ಲಕ್ಷಣ ಇಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣ ಇದೆ.ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 7,100 ಪರೀಕ್ಷೆ ನಡೆಸಲಾಗಿದೆ. ಐಸಿಎಂಆರ್ ಮಾರ್ಗಸೂಚಿಗಳಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಚಿಕಿತ್ಸೆಯ ವಿಧಿ ವಿಧಾನಗಳು ಹಾಗೂ ಚಿಕಿತ್ಸೆ ದರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.

ಇದೇ ಗುರುವಾರ ಮಾಸ್ಕ್ ಡೇ ಆಚರಿಸಲಾಗುವುದು. ವಿಧಾನಸೌಧದಿಂದ ಬೆಳಿಗ್ಗೆ 8.30 ಗಂಟೆಗೆ ಮಾಸ್ಕ್ ಧರಿಸಿ 1 ಕಿ.ಮೀ. ವಾಕ್ ಮಾಡಲಾಗುವುದು. ಅಲ್ಲದೆ, ರಾಜ್ಯಾದ್ಯಂತ, ಪಂಚಾಯತ್ ಮಟ್ಟದಲ್ಲಿಯೂ ಇದನ್ನು ಆಚರಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕ ಪಡಬೇಕಾಗಿಲ್ಲ. ಆದರೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದೆ ತೆಗೆದುಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.