ADVERTISEMENT

ಶಾಂತಿಯನ್ನು ಸಾರುವುದೇ ನಿಜವಾದ ಧರ್ಮ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 15:53 IST
Last Updated 15 ಜನವರಿ 2026, 15:53 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಕೆಂಗೇರಿ: ‘ಧರ್ಮವನ್ನು ಸೀಮಿತ ಚೌಕಟ್ಟಿನಲ್ಲಿ ಅರ್ಥೈಸಲಾಗುವುದಿಲ್ಲ. ಶಾಂತಿಯನ್ನು ಸಾರುವ ಹಾಗೂ ಸೌಹಾರ್ದತೆ ಬೆಸೆಯುವ ಬಂಧವೇ ನಿಜವಾದ ಧರ್ಮ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅಭಿಪ್ರಾಯಪಟ್ಟರು.

ಸೋಂಪುರದ ಬಸವೇಶ್ವರಸ್ವಾಮಿ ರಥೋತ್ಸವ ಮತ್ತು ಕಡಲೆಕಾಯಿ ಪರಿಷೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಚಕ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.

‘ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಯೊಬ್ಬರೂ ಶ್ರೀರಾಮನ ದರ್ಶನ ಮಾಡಿ ದೈವಕೃಪೆಗೆ ಪಾತ್ರರಾಗಬೇಕು. ಪ್ರಕೃತಿ ಹಾಗೂ ಮನುಜನ ನಡುವಿನ ಸಂಬಂಧದ ಸಾಂಕೇತಿಕವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ನಾಡಿನ ಸಂಸ್ಕೃತಿ, ಸಂಪ್ರದಾಯಗಳು ಮತ್ತಷ್ಟು ಶ್ರೀಮಂತವಾಗಲಿದೆ’ ಎಂದರು. 

ADVERTISEMENT

ಬಸವಣ್ಣ ದೇವರ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಪ್ರಗತಿಪರರು ಹಾಗೂ ಚಿಂತಕರ ಹೆಸರಿನಲ್ಲಿ ಹಿಂದೂ ಧರ್ಮವನ್ನು ಹಳಿಯುವ ಒಂದು ವರ್ಗ ಸಕ್ರಿಯವಾಗಿದೆ. ಇಂತಹ ಸ್ವಯಂಘೋಷಿತ ಬುದ್ಧಿ ಜೀವಿಗಳಿಂದ ಧರ್ಮದ ಉಳಿವು ಸಾಧ್ಯವೇ’ ಎಂದು ಪ್ರಶ್ನಿಸಿದರು.  

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ‘ಸನಾತನ ಧರ್ಮದಲ್ಲಿ ದೇವಾಲಯಗಳ ಪಾತ್ರ ಹಿರಿದಾಗಿದ್ದು, ನೆಲಮೂಲ ಸಂಸ್ಕೃತಿಯ ಕೊಂಡಿಗಳೆನಿಸಿವೆ. ಹೀಗಾಗಿ ಧಾರ್ಮಿಕ ಕಾರ್ಯ ಹಾಗೂ ಧರ್ಮ ರಕ್ಷಣೆಯಲ್ಲಿ ತೊಡಗಿರುವ ಕೆಂಗೇರಿ ಹೋಬಳಿ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ನಗರ ವ್ಯಾಪ್ತಿಯ ಐನೂರಕ್ಕೂ ಹೆಚ್ಚು ಅರ್ಚಕ ದಂಪತಿಗಳಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಮುಖಂಡರಾದ ಮೋಹನ್ ಕುಮಾರ್, ಶಶಿಕುಮಾರ್ ಹಾಗೂ ಬಸವಣ್ಣ ದೇವರ ಸೇವಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.