ADVERTISEMENT

ಯಶವಂತಪುರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್‌ವೈ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:08 IST
Last Updated 1 ಡಿಸೆಂಬರ್ 2019, 11:08 IST
ಶಿವಾಜಿನಗರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ರಾತ್ರಿ ಪಕ್ಷದ ಅಭ್ಯರ್ಥಿ ಎಂ.ಸರವಣ ಪರ ರೋಡ್‌ ಶೋ ನಡೆಸಿದರು. ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಉದಯ್ ಗರುಡಾಚಾರ್‌, ಎಸ್‌.ಆರ್‌.ವಿಶ್ವನಾಥ್‌ ಮತ್ತು ಮುಖಂಡ ನಿರ್ಮಲ್ ಕುಮಾರ್ ಸುರಾನ ಇದ್ದರು.–‍ಪ್ರಜಾವಾಣಿ ಚಿತ್ರ
ಶಿವಾಜಿನಗರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ರಾತ್ರಿ ಪಕ್ಷದ ಅಭ್ಯರ್ಥಿ ಎಂ.ಸರವಣ ಪರ ರೋಡ್‌ ಶೋ ನಡೆಸಿದರು. ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಉದಯ್ ಗರುಡಾಚಾರ್‌, ಎಸ್‌.ಆರ್‌.ವಿಶ್ವನಾಥ್‌ ಮತ್ತು ಮುಖಂಡ ನಿರ್ಮಲ್ ಕುಮಾರ್ ಸುರಾನ ಇದ್ದರು.–‍ಪ್ರಜಾವಾಣಿ ಚಿತ್ರ   

ರಾಜರಾಜೇಶ್ವರಿನಗರ: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಸುಮನಹಳ್ಳಿಯಿಂದ ನೈಸ್‌ ರಸ್ತೆಯವರೆಗೆ ಮೆಟ್ರೊ ರೈಲು ಕಾಮಗಾರಿಗೆ ಚಾಲನೆ, ಕಾವೇರಿ ಕುಡಿಯುವ ನೀರು ಮತ್ತು ಎಲ್ಲ ವರ್ಗದ ಕಲ್ಯಾಣಕ್ಕಾಗಿ ವಿಶೇಷ ಯೋಜನೆ ಹಮ್ಮಿಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಈ ಮೂಲಕ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಪರವಾಗಿ ಹೇರೋಹಳ್ಳಿ, ಬ್ಯಾಡರಹಳ್ಳಿ ಮತ್ತು ಮಾರುತಿ ನಗರಗಳಲ್ಲಿ ಮತ ಯಾಚಿಸಿ ಹೇಳಿದರು.

‘ಸೋಮಶೇಖರ್‌ ವಿಶೇಷ ಕಾರಣಕ್ಕಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ತ್ಯಾಗ ಮಾಡಿದ್ದಾರೆ. ಸದಾ ಅಭಿವೃದ್ಧಿಪರ ಚಿಂತನೆಯಲ್ಲಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಿದರೆ, ಯಶವಂತಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಹಲಸೂರಿನಲ್ಲಿ ರೋಡ್‌ ಶೋ:ಹಲಸೂರು ಕೆರೆಯ ಬಳಿ ಇರುವ ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯಡಿಯೂರಪ್ಪ,ಶಿವಾಜಿನಗರ ಕ್ಷೇತ್ರದಲ್ಲಿ ಪಕ್ಷದ ಎಂ.ಸರವಣ ಅವರ ಪರ ಮತ ಯಾಚಿಸಲು ರೋಡ್ ಶೋ ನಡೆಸಿದರು.

ಶಿವಾಜಿನಗರ ಕ್ಷೇತ್ರದಲ್ಲಿ ತಮಿಳು ಮತದಾರರ ಸಂಖ್ಯೆ ಹೆಚ್ಚು ಇರುವ ಪ್ರದೇಶದಲ್ಲೇ ರೋಡ್‌ ಶೋ ನಡೆಸಿದರು. ಹೊಸಕೋಟೆ, ಮಹಾಲಕ್ಷ್ಮಿಲೇಔಟ್‌ ಮತ್ತು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಪ್ರಚಾರ ನಡೆಸಲಿದ್ದಾರೆ.

ಬಿಜೆಪಿಗೆ ಸೇರ್ಪಡೆ: ರಾಮಸ್ವಾಮಿ ಪಾಳ್ಯ ವಾರ್ಡ್‌ ಕಾಂಗ್ರೆಸ್‌ನ ಪಾಲಿಕೆ ಸದಸ್ಯೆ ನೇತ್ರಾವತಿ ಕೃಷ್ಣೇಗೌಡ ಅವರ ಪತಿ ಕೃಷ್ಣೇಗೌಡ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ವೇಳೆ ಕಾಂಗ್ರೆಸ್‌ನ 25 ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಸಂಸದ ಪಿ.ಸಿ.ಮೋಹನ್‌ ಅವರು ರಾಮಸ್ವಾಮಿ ಪಾಳ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ, ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.