ADVERTISEMENT

ಆನ್‌ಲೈನ್‌ನಲ್ಲಿ ಸಿಗಲಿದೆ ಅಂಕಪಟ್ಟಿ!

ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿಯಲ್ಲಿ ಬೆಂಗಳೂರು ವಿ.ವಿ. ಶೈಕ್ಷಣಿಕ ದಾಖಲೆಗಳು

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:16 IST
Last Updated 20 ಮೇ 2019, 19:16 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರು ಇನ್ನು ಮುಂದೆ ಆನ್‌ಲೈನ್‌ ಮೂಲಕವೇ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಪಡೆಯಬಹುದಾಗಿದೆ. ವಿಶ್ವವಿದ್ಯಾಲಯವು ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿ (ಎನ್‌ಎಡಿ) ಜತೆ 2018–19ರಲ್ಲಿ ಮಾಡಿಕೊಂಡ ಒಪ್ಪಂದ ಅನ್ವಯ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದೆ.

ವಿಶ್ವವಿದ್ಯಾಲಯವು ಮೊದಲ ಹಂತದಲ್ಲಿ 2018ನೇ ಸಾಲಿನ ಮೊದಲ ಸೆಮಿಸ್ಟರ್‌ನ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಮತ್ತು ಇತ್ತೀಚೆಗೆ ನಡೆದ 54ನೇ ಘಟಿಕೋತ್ಸವದಲ್ಲಿ ಪದವಿ ಪಡೆದ 65 ಸಾವಿರ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನುಎನ್‌ಎಡಿಗೆ ಅಪ್‌ಲೋಡ್‌ ಮಾಡಲು ತೀರ್ಮಾನಿಸಿದೆ.

‘ವಿಶ್ವವಿದ್ಯಾಲಯದಿಂದ ಪದವೀಧರರಾದ ಎಲ್ಲರ ಶೈಕ್ಷಣಿಕ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆಮುಂಬರುವ ದಿನಗಳಲ್ಲಿ ಮಾಡುತ್ತೇವೆ’ ಎಂದು ಕುಲಸಚಿವ(ಮೌಲ್ಯಮಾಪನ) ಸಿ.ಶಿವರಾಜು ತಿಳಿಸಿದರು.

ADVERTISEMENT

‘ಆನ್‌ಲೈನ್‌ನಲ್ಲಿ ಲಭ್ಯವಾಗುವ ಪ್ರಮಾಣಪತ್ರ ಮತ್ತು ದಾಖಲೆಗಳು ದೃಢೀಕರಿಸಲ್ಪಟ್ಟಿರುತ್ತವೆ. ಮುದ್ರಿತ ಮಾದರಿಯ(ಹಾರ್ಡ್‌ಕಾಪಿ) ಪ್ರಮಾಣಪತ್ರಗಳನ್ನು ಪಡೆಯುವ ಅಗತ್ಯವೇ ಇರುವುದಿಲ್ಲ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಆನ್‌ಲೈನ್‌ನಲ್ಲಿ ಅಂಕಪಟ್ಟಿ ಪಡೆಯುವ ಬಗೆ

ಶೈಕ್ಷಣಿಕ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಲು ಬಯಸುವವರು ಬೆಂಗಳೂರು ವಿಶ್ವವಿದ್ಯಾಲಯದ ಜಾಲತಾಣದಲ್ಲಿನ ಎನ್‌ಎಡಿ ಲಿಂಕ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

‘ನೋಂದಣಿ ಮಾಡಿಕೊಂಡವರಿಗೆ ಒಂದು ನೋಂದಣಿ ಸಂಖ್ಯೆ ಮತ್ತು ರಹಸ್ಯ ಸಂಖ್ಯೆ ಜತೆಗೆ ಸ್ವೀಕೃತಿ ಪತ್ರ ಲಭ್ಯವಾಗುತ್ತದೆ. ಅದನ್ನು ಅವರು ಓದಿದ ಕಾಲೇಜಿಗೆ ಸಲ್ಲಿಸಬೇಕು. ಕಾಲೇಜಿನಿಂದ ನಮಗೆ ಮಾಹಿತಿ ರವಾನೆಯಾಗುತ್ತದೆ. ಬಳಿಕ ಆ ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳನ್ನು ಎನ್‌ಎಡಿ ಗೆ ಅಪ್‌ಲೋಡ್‌ ಮಾಡುತ್ತೇವೆ’ ಎಂದು ಕುಲಸಚಿವರು ವಿವರಿಸಿದರು.

ಆಧಾರ ಕಾರ್ಡ್‌ನೊಂದಿಗೆ ಮತ್ತು ಆಧಾರ್ ಕಾರ್ಡ್‌ ಇಲ್ಲದೆಯೂ ನೋಂದಣಿ ಮಾಡಿಕೊಳ್ಳುವ ಆಯ್ಕೆಯನ್ನುಎನ್‌ಎಡಿ ನೀಡಿದೆ.

ಲಿಂಕ್‌:https://bit.ly/2fvGnS6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.