ಬೆಂಗಳೂರು:‘ಶಿವಶರಣ ಮಾದಾರ ಚನ್ನಯ್ಯ ಅವರ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯನ್ನು ಕೂಡಲಸಂಗಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಸರ್ಕಾರ ಈ ಬಜೆಟ್‌ನಲ್ಲಿ ₹500 ಕೋಟಿ ಹಣ ಮೀಸಲಿಡಬೇಕು’ ಎಂದು ಕರ್ನಾಟಕ ಮಾದಾರ ಚನ್ನಯ್ಯ ಸೇನೆ ರಾಜ್ಯ ಸಮಿತಿ ಒತ್ತಾಯಿಸಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ.ಎಂ.ಜಯಗೋಪಾಲ,‘ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಶರಣ ಮಾದಾರ ಚನ್ನಯ್ಯ ಅವರ ಹೆಸರಿಡಬೇಕು’ ಎಂದು ಒತ್ತಾಯಿಸಿದರು.
‘ಆದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಯೋಜನೆಗಳಿಗೆ ನೀಡುತ್ತಿರುವ ಸಹಾಯಧನದ ಮಿತಿಯನ್ನು ₹5 ಲಕ್ಷಕ್ಕೆ ಏರಿಸಬೇಕು. ದೇವದಾಸಿಯರ ಪುನರ್ ವಿವಾಹ ಹಾಗೂ ಅವರ ಮಕ್ಕಳ ವಿವಾಹಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಿಂದನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ವೃತ್ತಿ ತರಬೇತಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದರು.
‘ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಹಗರಣಗಳ ಸರಮಾಲೆಯಲ್ಲಿ ಮುಳುಗಿ, ನೂರಾರು ಕೋಟಿ ಅಕ್ರಮ ಎಸಗಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿದೆ. ಈ ನಿಗಮವನ್ನು ಕೂಡಲೇ ಮುಚ್ಚಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.