ಬೆಂಗಳೂರು: ‘ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ನಿಗದಿ ಮಾಡುವ ಅನುದಾನವನ್ನು ಅದೇ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು. ನಾಲೆ, ವಿಮಾನ ನಿಲ್ದಾಣ, ಮೇಲ್ಸೇತುವೆ ನಿರ್ಮಾಣಕ್ಕೆ ಬಳಕೆ ಮಾಡಬಾರದು’ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.
ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ನಗರದಲ್ಲಿ ಬುಧವಾರ ಆಯೋಜಿಸಿದ್ದ 2022–23ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಉದ್ಘಾಟಿಸಿದ ಅವರು, ‘ಹೆಸರಿಗಷ್ಟೇ ಬಜೆಟ್‌ನಲ್ಲಿ ಘೋಷಣೆ ಮಾಡಿದರೆ ಸಾಲದು’ ಎಂದರು.
‘ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ₹26 ಸಾವಿರ ಕೋಟಿ ಒದಗಿಸಲಾಗಿದೆ ಎಂದಾಗ ಎಲ್ಲರ ಕಣ್ಣುಗಳು ಕೆಂಪಗಾಗುತ್ತವೆ. ಈ ರೀತಿಯ ಘೋಷಣೆ ಕೇವಲ ಹೆಸರಿಗಷ್ಟೇ ಆಗುತ್ತಿದೆ. ನಾಲೆ ನಿರ್ಮಾಣಕ್ಕೆ ಈ ಅನುದಾನ ಬಳಕೆ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಈ ವಿಷಯವನ್ನು ಬಜೆಟ್ ಪೂರ್ವಭಾವಿ ಸಭೆಯಲ್ಲೂ ಪ್ರಶ್ನೆ ಮಾಡಿದ್ದೇವೆ. ನೌಕರರಿಗೆ ಸಂಬಳ ಕೊಡಲು ಈ ಅನುದಾನ ಬಳಕೆಯಾಗಬಾರದು. ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ಹೇಳಿದರು.
‘ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಯೋಚನೆ ಮಾಡುವ ರಾಜಕಾರಣಿಗಳು ಕಡಿಮೆಯಾಗುತ್ತಿದ್ದಾರೆ. ಹಸಿವು, ದೌರ್ಜನ್ಯ, ಶೋಷಣೆಯ ವಿರುದ್ಧದ ರಾಜಕಾರಣ ಇಲ್ಲವಾಗುತ್ತಿದೆ. ಭಾವನಾತ್ಮಕ ವಿಷಯಗಳನ್ನಷ್ಟೇ ಮುಂದಿಟ್ಟು ರಾಜಕಾರಣ ಮಾಡುವುದು ತರವಲ್ಲ’ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ‘ಶಿಕ್ಷಣ, ಉದ್ಯೋಗ, ತರಬೇತಿ, ಮೂಲ ಸೌಕರ್ಯ ಮತ್ತು ಅರ್ಥಿಕ ಅಭಿವೃದ್ಧಿ ಆಧರಿಸಿ ಬಜೆಟ್ ರೂಪುಗೊಳ್ಳಬೇಕು. ಆದರೆ, ಹಿಂದಿನ ವರ್ಷದ ಬಜೆಟ್ ಇಟ್ಟುಕೊಂಡು ಶೇ 10ರಷ್ಟು ಹೆಚ್ಚಳ ಮಾಡುವುದರಲ್ಲಿ ಪ್ರಯೋಜನವೇನೂ ಇಲ್ಲ. ಈ ರೀತಿ ಆಗಬಾರದು ಎಂಬುದನ್ನು ಸರ್ಕಾರಕ್ಕೆ ತಿಳಿಸಿದ್ದೇವೆ’ ಎಂದು ಹೇಳಿದರು.
‘ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಶೇ 4ರಷ್ಟು ಬಡ್ಡಿ ದರದಲ್ಲಿ ಎಲ್ಲರಿಗೂ ಸಾಲ ಸಿಗುತ್ತಿದೆ. ದಲಿತ ಉದ್ಯಮಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿರುವ ಮೊದಲ ತಲೆಮಾರಿನ ಕುಟುಂಬಗಳಿಗೂ ಬೇರೆ ಸಮುದಾಯದ ನಿಯಮಗಳನ್ನೇ ಹೇರಿದರೆ ಉದ್ಯಮಿಗಳಾಗುವುದು ಹೇಗೆ’ ಎಂದು ಪ್ರಶ್ನಿಸಿದರು.
‘ಕಂದಾಯ ಸಚಿವರೇ ಹೇಳಿರುವಂತೆ ಉಳುಮೆಯಾಗದ 10 ಲಕ್ಷ ಹೆಕ್ಟೇರ್ ಭೂಮಿ ಇದೆ. ಅದನ್ನು ಭೂ ರಹಿತ ದಲಿತರಿಗೆ ಹಂಚಿ ನೀರಾವರಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಈ ರೀತಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ದಲಿತ ಶಾಸಕರು ಮತ್ತು ಮುಖಂಡರು ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿ ಅವರಿಗೆ ವಿವರಿಸೋಣ’ ಎಂದು ಹೇಳಿದರು.
‘ದಲಿತರ 800 ಎಕರೆ ಭೂಮಿ ಬೇರೆಯವರಿಗೆ’
‘ಬೆಂಗಳೂರು ಸುತ್ತಮುತ್ತಲ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಂಚಿಕೆಯಾಗಬೇಕಿದ್ದ 800 ಎಕರೆಯಷ್ಟು ಭೂಮಿ ದಲಿತೇತರಿಗೆ ಹಂಚಿಕೆಯಾಗಿದೆ’ ಎಂದು ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸ್ ಆರೋಪಿಸಿದರು.
‘ಅಷ್ಟೇ ಭೂಮಿಯನ್ನು ಬೇರೆ ಕಡೆ ದಲಿತ ಉದ್ದಿಮೆದಾರರಿಗೆ ಒದಗಿಸಬೇಕು ಎಂದು ಸದನ ಸಮಿತಿ ಶಿಫಾರಸು ಮಾಡಿದೆ. ಜಗದೀಶ ಶೆಟ್ಟರ್ ಅವರು ಕೈಗಾರಿಕಾ ಸಚಿವರಾಗಿದ್ದಾಗಲೇ ತೀರ್ಮಾನ ಆಗಿದೆ. ಆದರೂ, ಅಧಿಕಾರಿಗಳು ದಲಿತರಿಗೆ ನ್ಯಾಯ ಒದಗಿಸುತ್ತಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.