ADVERTISEMENT

ಪಾಯ ಅಗೆತ; ವಾಲಿದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:31 IST
Last Updated 14 ನವೆಂಬರ್ 2018, 19:31 IST
ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ವಾಲಿರುವ ಕಟ್ಟಡ
ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ವಾಲಿರುವ ಕಟ್ಟಡ   

ಬೆಂಗಳೂರು: ಕಟ್ಟಡವೊಂದರ ನಿರ್ಮಾಣಕ್ಕೆ ಪಾಯ ಅಗೆದಿದ್ದರಿಂದ ಮೂರು ಅಂತಸ್ತಿನ ಕಟ್ಟಡವೊಂದು ವಾಲಿ ಬೀಳುವ ಅಪಾಯದಲ್ಲಿದೆ.

ಬೊಮ್ಮನಹಳ್ಳಿಯ ವಿರಾಟ್ ನಗರದ 5ನೇ ಕ್ರಾಸ್‌ನಲ್ಲಿ ಅಸ್ಲಾಂ ಎಂಬುವವರು ತಮ್ಮ ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೋಡಿದ್ದಾರೆ. ಯಾವುದೇ ಸೆಟ್ ಬ್ಯಾಕ್ ಬಿಡದೇ ಪಾಯ ತೋಡಿದ್ದರಿಂದ ವಾಸುದೇವ್ ಎಂಬುವವರಿಗೆ ಸೇರಿದ ಪಕ್ಕದ ಕಟ್ಟಡ ವಾಲಿದೆ. ಇದರಿಂದ ಸುತ್ತಮುತ್ತಲಿನ ಜನ ಭಯಭೀತಗೊಂಡಿದ್ದಾರೆ. ಇಲ್ಲಿ ವಾಸವಿದ್ದ ನಾಲ್ಕು ಕುಟುಂಬಗಳು ಮನೆ ಖಾಲಿ ಮಾಡಿ ಪಕ್ಕದ ಮನೆಗಳಲ್ಲಿ ಹಾಗೂ ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಹೂಡಿವೆ.

ಈ ಸಂಬಂಧ ದೂರು ದಾಖಲಾಗಿದೆ. ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಸಿದ್ಧೇಗೌಡ, ಪಾಲಿಕೆ ಸದಸ್ಯ ರಾಮಮೋಹನ್ ರಾಜ್ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾದ ಅಸ್ಲಾಂ ಅವರಿಗೆ ನೋಟಿಸ್ ಜಾರಿ ಮಾಡಿದೆ. ದೂರಿನ ಹಿನ್ನೆಲೆಯಲ್ಲಿ ಅಸ್ಲಾಂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಟ್ಟಡದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದು, ಜನ ಅತ್ತ ಸುಳಿಯದಂತೆ ಕಾವಲು ಹಾಕಲಾಗಿದೆ.

ADVERTISEMENT

‘ಪಾಯ ಅಗೆಯುವಾಗ ನಮ್ಮ ಗಮನಕ್ಕೆ ತರಲಿಲ್ಲ. ಎರಡು ಅಡಿ ಜಾಗ ಬಿಟ್ಟು ನಾವು ಮನೆ ಕಟ್ಟಿದ್ದೇವೆ. ನೀವೂ ಜಾಗ ಬಿಟ್ಟು ಕಟ್ಟಿ ಎಂದು ಕೇಳಿಕೊಂಡರೂ ಅಸ್ಲಾಂ ಎಂಬುವವರು ನಮ್ಮ ಮಾತಿಗೆ ಕಿವಿಗೊಡದೆ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಇದರಿಂದ ಕಟ್ಟಡ ವಾಲಿದೆ. ನಮಗೆ ನ್ಯಾಯ ಕೊಡಿಸಬೇಕು. ಅವರ ಮೇಲೆ ಕ್ರಮ ಜರುಗಿಸಬೇಕು’ ಎನ್ನತ್ತಾರೆ ಕಟ್ಟಡದ ಮಾಲೀಕ ವಾಸುದೇವ್.

‘ಇದ್ದಕ್ಕಿದ್ದಂತೆ ಕಟ್ಟಡ ವಾಲಲು ಶುರುವಾಯಿತು. ತಕ್ಷಣವೇ ನಾವು ಹೊರಗಡೆ ಬಂದೆವು. ಬಿಬಿಎಂಪಿಯವರೇ ಮನೆಯ ಸಾಮಾನುಗಳನ್ನು ಹೊರಗಡೆ ತಂದು ಕೊಟ್ಟರು. ಸದ್ಯ ನಾವು ಅಂಬೇಡ್ಕರ್ ಭವನದಲ್ಲಿ ವಾಸಿಸುತ್ತಿದ್ದೇವೆ. ಬಾಡಿಗೆಗೆ ಇದ್ದವರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ನನ್ನ ಪತಿ ಕೊರಿಯರ್ ಕೆಲಸ ಮಾಡಿಕೊಂಡು, ಹೊಟ್ಟೆಬಟ್ಟೆ ಕಟ್ಟಿ ಮನೆ ಕಟ್ಟಿಕೊಂಡಿದ್ದೆವು. ಇದೀಗ ಇದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೆ. ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಮನೆಯ ಒಡತಿ ರೇಣುಕಾ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.