ADVERTISEMENT

ಸಾಲ ಮಾಡಿಕೊಂಡಿದ್ದ ಉದ್ಯಮಿ ಆತ್ಮಹತ್ಯೆ

ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಿಸಲು ಸಾಲ ಮಾಡಿಕೊಂಡಿದ್ದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 19:00 IST
Last Updated 12 ನವೆಂಬರ್ 2018, 19:00 IST

ಬೆಂಗಳೂರು: ಮಾರತ್ತಹಳ್ಳಿ ಬಳಿಯ ಪಣಂತೂರಿನಲ್ಲಿ ‘ಚೌರಾಸಿಯಾ ಮ್ಯಾನರ್ ಫೇಸ್– 2’ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಿದ್ದ ಉದ್ಯಮಿ ವಿಜಯಪ್ರಕಾಶ್ ಚೌಕಾಸಿಯಾ ಎಂಬುವರು, ತಮ್ಮ ಮನೆಯ ಶೌಚಾಲಯದಲ್ಲೇ ಗುಂಡು ಹಾರಿಸಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ದೊಡ್ಡನೆಕ್ಕುಂದಿಯ ಫ್ರೆಂಡ್ಸ್‌ ಲೇಔಟ್‌ ನಿವಾಸಿಯಾಗಿದ್ದ ವಿಜಯಪ್ರಕಾಶ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಿದ್ದರು. ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಮನೆಯ ಶೌಚಾಲಯಕ್ಕೆ ಹೋಗಿ ತಮ್ಮದೇ ಪಿಸ್ತೂಲ್‌ನಿಂದ ತಲೆಗೆ ಎರಡು ಬಾರಿ ಗುಂಡು ಹೊಡೆದುಕೊಂಡಿದ್ದರು. ಶಬ್ದ ಕೇಳಿ ಸಹಾಯಕ್ಕೆ ಹೋದ ಪತ್ನಿ, ಸ್ಥಳೀಯರ ಸಹಾಯದಿಂದ ವೈದೇಹಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಎಚ್‌ಎಎಲ್‌ ಪೊಲೀಸರು ಹೇಳಿದರು.

‘ಸಹೋದರ ವಿಜಯಕುಮಾರ್ ಜೊತೆಯಲ್ಲಿ ಪತಿ ವಿಜಯಪ್ರಕಾಶ್‌, ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸುತ್ತಿದ್ದರು. ಅದಕ್ಕಾಗಿ ಸಾಲ ಮಾಡಿದ್ದರು. ಜೊತೆಗೆ ಹಣಕಾಸು ವ್ಯವಹಾರಗಳನ್ನೂ ನಡೆಸುತ್ತಿದ್ದರು. ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಅದರಿಂದ ನೊಂದಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪತ್ನಿ ದೂರುನೀಡಿರುವುದಾಗಿ ಪೊಲೀಸರು ವಿವರಿಸಿದರು.

ADVERTISEMENT

ಮುಖ್ಯಮಂತ್ರಿಗೆ ದೂರು: ವಿಜಯಪ್ರಕಾಶ್ ಹಾಗೂ ವಿಜಯಕುಮಾರ್ ಚೌರಾಸಿಯಾ ಸಹೋದರರು, ತಮ್ಮ ‘ಚೌರಾಸಿಯಾ ಮ್ಯಾನರ್ ಫೇಸ್– 2’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಫ್ಲ್ಯಾಟ್‌ ಕೊಡುವುದಾಗಿ ಹೇಳಿ ಮಧ್ಯಪ‍್ರದೇಶದ ವಂದನಾ ಎಂಬುವರಿಂದ₹60 ಲಕ್ಷ ಪಡೆದಿದ್ದರು. ಆದರೆ, ವಂದನಾ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಮಾಡಿಸಿರಲಿಲ್ಲ.

ವಂದನಾ,ಮುಖ್ಯಮಂತ್ರಿಯವರ ಜನತಾ ದರ್ಶನಕ್ಕೆ ಹಾಜರಾಗಿ, ಸಹೋದರರ ವಿರುದ್ಧ ದೂರು ನೀಡಿದ್ದರು. ಅದಕ್ಕೆ ಸ್ಪಂದಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಮಹಿಳೆಗೆ ಆಗಿರುವ ಅನ್ಯಾಯ ಸರಿಪಡಿಸಿ’ ಎಂದು ಪೊಲೀಸರಿಗೆ ಸೂಚಿಸಿದ್ದರು. ವೈಟ್‌ಫೀಲ್ಡ್‌ ಪೊಲೀಸರು, ಮಹಿಳೆ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಮಾಡಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.