ADVERTISEMENT

ಪ್ರಯಾಣ ದರ ದುಬಾರಿ

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರ ಜೇಬಿಗೆ ಕತ್ತರಿ

ಶರತ್‌ ಹೆಗ್ಡೆ
Published 3 ನವೆಂಬರ್ 2018, 19:29 IST
Last Updated 3 ನವೆಂಬರ್ 2018, 19:29 IST
KSRTC.jpg
KSRTC.jpg   

ಬೆಂಗಳೂರು: ದೀ‍ಪಾವಳಿ ಸಡಗರಕ್ಕೆ ಊರಿಗೆ ಹೋಗಲು ಹೊರಟವರ ಜೇಬಿಗೆ ಪ್ರಯಾಣ ದರ ಏರಿಕೆಯ ಕತ್ತರಿ ಬಿದ್ದಿದೆ. ದಸರಾ ವೇಳೆ ಖಾಸಗಿ ಬಸ್‌ಗಳಿಗೆ ವಿಪರೀತ ದರ ತೆತ್ತು ಕೈಸುಟ್ಟುಕೊಂಡಿದ್ದ ಜನರು ಈಗ ಮೂರುಪಟ್ಟು ಹೆಚ್ಚು ಬೆಲೆ ತೆರಬೇಕಾಗಿದೆ.

ಈ ರೀತಿ ದರ ವಸೂಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಟಾಚಾರಕ್ಕೆ ಪ್ರಕಟಣೆ ಕೊಟ್ಟಿರುವ ಸಾರಿಗೆ ಇಲಾಖೆ, ಕೈತೊಳೆದುಕೊಂಡಿದೆ. ಇತ್ತ ಬಸ್‌ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಏರಿದ ದರವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ನ. 5ರಿಂದ 11ರವರೆಗೆ ಇದೇ ದುಬಾರಿ ದರವನ್ನು ಖಾಸಗಿ ಬಸ್‌ಗಳು ಕಾಯ್ದುಕೊಂಡಿವೆ.

ADVERTISEMENT

ಸಾಮಾನ್ಯ ದಿನಗಳಲ್ಲಿ ₹500ರಿಂದ ಆರಂಭವಾಗುವ ಪ್ರಯಾಣದರ ಈ ಬಾರಿ ₹1,500ಕ್ಕೆ ಏರಿದೆ. 750ರಿಂದ 800ರ ಆಸುಪಾಸಿ
ನಲ್ಲಿದ್ದ ಸ್ಲೀಪರ್‌/ ಎಸಿ ಸ್ಲೀಪರ್‌ ಬಸ್‌ಗಳ ಪ್ರಯಾಣದರ‌₹2,200ರವರೆಗೆ ಏರಿಕೆಯಾಗಿದೆ. ಬೇಡಿಕೆ ಆಧಾರದಲ್ಲಿ ಎಂದಿಗಿಂತ ಹೆಚ್ಚು ಬಸ್‌ಗಳನ್ನು ಖಾಸಗಿಯವರು ವ್ಯವಸ್ಥೆಗೊಳಿಸಿದ್ದಾರೆ. ಕೆಎಸ್‌ಆರ್‌ಟಿಸಿಯು 1,500 ಹೆಚ್ಚುವರಿ ಬಸ್‌ಗಳನ್ನು ಸಂಚಾರಕ್ಕೆ ಅಣಿಗೊಳಿಸಿದೆ. ಎರಡೂ ಕ್ಷೇತ್ರದ (ಖಾಸಗಿ ಮತ್ತು ಸರ್ಕಾರಿ) ಬಸ್‌ಗಳ ವೆಬ್‌ಸೈಟ್‌ಗಳಲ್ಲಿ ಸೀಟುಗಳು ಭರ್ತಿಯಾದ ಮಾಹಿತಿ ಇದೆ.

ಕೆಎಸ್‌ಆರ್‌ಟಿಸಿಯು ಕೂಡಾ ಪ್ರೀಮಿಯಂ ಬಸ್‌ಗಳ ಪ್ರಯಾಣದರವನ್ನುಶೇ 20ರಿಂದ 30ರಷ್ಟು ಏರಿಸಿದೆ. ₹650ರಿಂದ 750ರ ಆಸು
ಪಾಸಿನಲ್ಲಿದ್ದ ಟಿಕೆಟ್‌ ಬೆಲೆ ₹1 ಸಾವಿರದಿಂದ 1,080ರವರೆಗೆ ಏರಿಕೆಯಾಗಿದೆ.

ಖಾಸಗಿ ಬಸ್‌ ಮಾಲೀಕರು ಹೇಳುವುದೇನು?: ‘ದರ ಇಳಿಸಲು ನಾವೂ ಸಿದ್ಧ. ಆದರೆ, ತ್ರೈಮಾಸಿಕ ತೆರಿಗೆ ಪ್ರಮಾಣವನ್ನು ಇಳಿಸಲಿ. ಐಷಾರಾಮಿ ಬಸ್‌ನ ಪ್ರತಿ ಸೀಟ್‌ಗೆ ₹3,900 (ಸ್ಲೀಪರ್‌ ಬಸ್‌ಗೆ ಪ್ರತಿ ಸೀಟ್‌ಗೆ ₹ 3 ಸಾವಿರ) ತೆರಿಗೆ ಕಟ್ಟಬೇಕು. 53ಸೀಟುಗಳ ಒಂದು ಬಸ್‌ಗೆ ಮೂರು ತಿಂಗಳಿಗೆ ₹ 2.67 ಲಕ್ಷ ತೆರಿಗೆ ಕಟ್ಟಬೇಕು. ಜತೆಗೆ ವಿಪರೀತ ಏರಿರುವ ಡೀಸೆಲ್‌ ದರ, ವಾಹನ ನಿರ್ವಹಣೆ, ಟೋಲ್‌, ಸಿಬ್ಬಂದಿ ವೇತನವೂ ಹೊರೆಯಾಗಿದೆ. ಇದನ್ನು ಹೊಂದಿಸಿಕೊಳ್ಳಲು ಹಬ್ಬಗಳ ಸಮಯದಲ್ಲಿ ಅನಿವಾರ್ಯವಾಗಿ ದರ ಏರಿಸುತ್ತೇವೆ’ ಎನ್ನುತ್ತಾರೆ ಬಸ್‌ ಆಪರೇಟರ್ಸ್‌ ಕಾನ್‌ಫೆಡರೇಷನ್‌ ಆಫ್‌ ಇಂಡಿಯಾದ ಚೇರ್ಮನ್‌, ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಮಾಲೀಕ ಕೆ.ಟಿ.ರಾಜಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.