ADVERTISEMENT

₹ 10 ಲಕ್ಷ ಮೌಲ್ಯದ ಬಸ್‌ ಶೆಲ್ಟರ್ ಕಳ್ಳತನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 17:16 IST
Last Updated 5 ಅಕ್ಟೋಬರ್ 2023, 17:16 IST
<div class="paragraphs"><p>ಬಸ್‌ ಶೆಲ್ಟರ್‌ </p></div>

ಬಸ್‌ ಶೆಲ್ಟರ್‌

   

ಬೆಂಗಳೂರು: ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬಸ್‌ ಶೆಲ್ಟರ್‌(ತಂಗುದಾಣ) ಕಳ್ಳತನವಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸೈನ್‌ಪೋಸ್ ಇಂಡಿಯಾ ಕಂಪನಿಯ ಉಪಾಧ್ಯಕ್ಷರಾದ ಎನ್‌. ರವಿ ರೆಡ್ಡಿ ಅವರು ಶೆಲ್ಟರ್ ಕಳ್ಳತನ ಸಂಬಂಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ನಗರದಲ್ಲಿರುವ ಬಸ್ ತಂಗುದಾಣಗಳಿಗೆ ಶೆಲ್ಟರ್ ಅಳವಡಿಸುವ ಗುತ್ತಿಗೆಯನ್ನು ಬಿಬಿಎಂಪಿ ವತಿಯಿಂದ ಸೈನ್‌ಪೋಸ್ ಇಂಡಿಯಾ ಕಂಪನಿಗೆ ವಹಿಸಲಾಗಿದೆ. ಅದರಂತೆ ನಗರದ ಹಲವು ತಂಗುದಾಣಗಳಲ್ಲಿ ಶೆಲ್ಟರ್ ನಿರ್ಮಿಸಲಾಗಿದ್ದು, ಮತ್ತಷ್ಟು ಕಡೆ ನಿರ್ಮಾಣ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

‘ಕನ್ನಿಂಗ್‌ಹ್ಯಾಮ್ ರಸ್ತೆಯ ಕಾಫಿ ಡೇ ಎದುರು ಬಸ್‌ ತಂಗುದಾಣ ಗುರುತಿಸಲಾಗಿತ್ತು. ಅದೇ ಸ್ಥಳದಲ್ಲಿ ಆಗಸ್ಟ್ 21ರಂದು ₹ 10 ಲಕ್ಷ ಮೌಲ್ಯದ ಶೆಲ್ಟರ್ ನಿರ್ಮಿಸಲಾಗಿತ್ತು. ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಸೈನ್‌ಪೋಸ್‌ ಇಂಡಿಯಾ ಕಂಪನಿ ಪ್ರತಿನಿಧಿಗಳು, ಅಗಸ್ಟ್ 28ರಂದು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಹೊಸದಾಗಿ ಹಾಕಲಾಗಿದ್ದ ಶೆಲ್ಟರ್ ಸ್ಥಳದಲ್ಲಿ ಇರಲಿಲ್ಲ. ಬಳಿಕ, ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದ್ದರು. ಶೆಲ್ಟರ್ ಬಗ್ಗೆ ತಮಗೆ ಗೊತ್ತಿಲ್ಲವೆಂದು ಅಧಿಕಾರಿಗಳು ಹೇಳಿದ್ದರು. ಇದಾದ ನಂತರವೇ ರವಿ ರೆಡ್ಡಿ, ಠಾಣೆಗೆ ದೂರು ನೀಡಿದ್ದಾರೆ’ ಎಂದರು.

ತಿಂಗಳ ನಂತರ ದೂರು: ‘ಶೆಲ್ಟರ್ ಕಳ್ಳತನ ಬಗ್ಗೆ ಒಂದು ತಿಂಗಳ ನಂತರ ದೂರು ನೀಡಿದ್ದಾರೆ. ಶೆಲ್ಟರ್ ಸುತ್ತಮುತ್ತ ಇರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ದೂರಿನಲ್ಲಿ ಕೆಲ ಸಂಗತಿಗಳು ಸ್ಪಷ್ಟವಾಗಿಲ್ಲ. ಈ ಬಗ್ಗೆ ದೂರುದಾರರಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.