ADVERTISEMENT

ಖಾಸಗಿ ಮ್ಯಾನ್‌ಹೋಲ್, ಎಸ್‌ಟಿಪಿ ಏಜೆನ್ಸಿಗಳ ನೋಂದಣಿ ಕಡ್ಡಾಯಗೊಳಿಸಿದ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 13:27 IST
Last Updated 23 ಫೆಬ್ರುವರಿ 2026, 13:27 IST
   

ಬೆಂಗಳೂರು: ನಗರದಲ್ಲಿ ಖಾಸಗಿ ಮ್ಯಾನ್‌ಹೋಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ವಚ್ಛಗೊಳಿಸುವ ಎಲ್ಲ ಖಾಸಗಿ ಏಜೆನ್ಸಿಗಳು ಮತ್ತು ವಾಹನಗಳ ನೋಂದಣಿಯನ್ನು ಬೆಂಗಳೂರು ಜಲಮಂಡಳಿ ಕಡ್ಡಾಯಗೊಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ 1964ರ ಸೆಕ್ಷನ್ 84 ಮತ್ತು 88ರ ಅಡಿಯಲ್ಲಿ ಈ ಹಿಂದೆ ನೀಡಲಾಗಿದ್ದ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್‌ ಮನೋಹರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಾ.7 ರ ಒಳಗೆ ಕಡ್ಡಾಯ ನೋಂದಣಿ:

ADVERTISEMENT

ಖಾಸಗಿ ಒಳಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್ ಮತ್ತು ಎಸ್‌ಟಿಪಿ ಘಟಕಗಳನ್ನು ಸ್ವಚ್ಛಗೊಳಿಸುವ ವಾಹನಗಳ ಮಾಲೀಕರು ಮತ್ತು ಏಜೆನ್ಸಿಗಳನ್ನು ಗುರುತಿಸಿ ಮಾ.7 ರೊಳಗೆ ಕಡ್ಡಾಯವಾಗಿ ವಿಭಾಗ ಮಟ್ಟದಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ:

ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಚಯಗಳು, ಗ್ರೂಪ್ ಹೌಸ್ ಮತ್ತು ಖಾಸಗಿ ಬಡಾವಣೆಗಳ ಎಸ್‌ಟಿಪಿ ಮತ್ತು ಮ್ಯಾನ್‌ಹೋಲ್‌ಗಳ ನಿರ್ವಹಣೆಯನ್ನು ಕಡ್ಡಾಯವಾಗಿ ಜಲಮಂಡಳಿಯಲ್ಲಿ ನೋಂದಾಯಿತವಾಗಿರುವ ಏಜೆನ್ಸಿಗಳ ಮುಖಾಂತರವೇ ಮಾಡಿಸಬೇಕು ಎಂದು ಸೂಚಿಸಲಾಗಿದೆ.

ನೋಂದಾಯಿಸಲ್ಪಡದ ಅಥವಾ ಅನಧಿಕೃತ ವ್ಯಕ್ತಿಗಳ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡಾಗ ಯಾವುದಾದರೂ ಅನಾಹುತ ಸಂಭವಿಸಿದಲ್ಲಿ, ಆಯಾ ವಾಣಿಜ್ಯ ಕಟ್ಟಡ / ವಸತಿ ಸಮುಚ್ಚಯ / ಖಾಸಗಿ ಬಡಾವಣೆಗಳ ಮಾಲೀಕರು ಅಥವಾ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ರವರೇ ನೇರ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.

ಈ ನಿಯಮಾವಳಿಗಳ ಕುರಿತು ಎಲ್ಲ ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳ ಮಾಲೀಕರು ಹಾಗೂ ಅಸೋಸಿಯೇಷನ್‌ಗಳಿಗೆ ಕೂಡಲೇ ಸೂಚನಾ ಪತ್ರವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.