ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ(ಬಿಡಬ್ಲ್ಯುಎಸ್‌ಎಸ್‌ಬಿ) ಕಾವೇರಿ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಪೋರ್ಟಲ್(ಜಾಲತಾಣ) ಹ್ಯಾಕ್ ಮಾಡಿ, ಅಲ್ಲಿಂದ 2.90 ಲಕ್ಷಕ್ಕೂ ಹೆಚ್ಚು ಗ್ರಾಹಕರ ದತ್ತಾಂಶಗಳನ್ನು ಕಳವು ಮಾಡಲಾಗಿದೆ.
ಈ ಸಂಬಂಧ ಹಲಸೂರು ಗೇಟ್ ಉಪ ವಿಭಾಗದ ಕೇಂದ್ರ ವಿಭಾಗದ ಸೆನ್ ಠಾಣೆಗೆ ದೂರು ನೀಡಲಾಗಿದ್ದು, ಸೈಬರ್ ಅಪರಾಧ ವಿಭಾಗದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ದತ್ತಾಂಶ ರಕ್ಷಣೆಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಎಂಜಿನಿಯರ್ ವಿ.ಸನತ್‌ಕುಮಾರ್ ದೂರಿನಲ್ಲಿ ಕೋರಿದ್ದಾರೆ.
‘ಉಳಿದ ದತ್ತಾಂಶ ಕಳವು ಆಗದಂತೆ ಹಾಗೂ ಅನಧಿಕೃತ ವ್ಯಕ್ತಿಗಳು ಜಾಲತಾಣವನ್ನು ಪ್ರವೇಶಿಸದಂತೆ ಜಲಮಂಡಳಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತನಿಖೆಗೆ ಅಗತ್ಯವಿರುವ ತಾಂತ್ರಿಕ ವಿವರ ಹಾಗೂ ದಾಖಲಾತಿಗಳನ್ನು ನೀಡಲಾಗುವುದು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೈಬರ್ ಅಪರಾಧಿಗಳು ಅಥವಾ ಹ್ಯಾಕರ್‌ಗಳು ಕಳವು ಮಾಡಿದ ಈ ದಾಖಲೆಗಳ ಮೂಲಕ ಗ್ರಾಹಕರ ಪಾನ್, ಆಧಾರ್ ನಂಬರ್, ಪಾವತಿ ದತ್ತಾಂಶ ಮತ್ತು ಮೊಬೈಲ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ 500 ಡಾಲರ್‌ಗೆ (₹42,517) ಮಾರಾಟಕ್ಕೆ ಇಟ್ಟಿದ್ದರು. ಬೆಂಗಳೂರಿನ ಕ್ಲೌಡ್‌ಸೆಕ್ ಎಂಬ ಸೈಬರ್ ಸೆಕ್ಯುರಿಟಿ ಕಂಪನಿ ನಡೆಸಿದ ತನಿಖೆಯಿಂದ ಈ ದತ್ತಾಂಶ ಕಳವು ಪ್ರಕರಣ ನಡೆದಿರುವುದು ಗೊತ್ತಾಗಿತ್ತು.
ತನಿಖೆ ನಡೆಸಿದ ಕಂಪನಿಯ ಸಂಶೋಧನಾಧಿಕಾರಿ ಸೌರಜೀತ್ ಮಜುಂದಾರ್ ಅವರು ಸಿದ್ಧಪಡಿಸಿರುವ ತನಿಖಾ ವರದಿಯನ್ನು ಜಲಮಂಡಳಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯ ಅಧಿಕಾರಿಗೆ ಇ–ಮೇಲ್ ಮೂಲಕ ರವಾನಿಸಿದ್ದಾರೆ.
ಸೈಬರ್ ಅಪರಾಧಿಗಳು ಜಲಮಂಡಳಿಯ ದತ್ತಾಂಶಗಳನ್ನು ಕಳವು ಮಾಡಿ, ಅದಕ್ಕೆ ‘ಪೈರೇಟ್ಸ್– ಗೋಲ್ಡ್’(pirates_gold) ಎಂಬ ಬಳಕೆದಾರರ ಹೆಸರಿನಲ್ಲಿ(ಯೂಸರ್ ನೇಮ್) ಭೂಗತ ದತ್ತಾಂಶ ಸೋರಿಕೆ ಜಾಲತಾಣವಾಗಿರುವ ‘ಬ್ರೀಚ್ ಫೋರಂ’ ಎಂಬ ವೇದಿಕೆಯಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಇದನ್ನು ಕ್ಲೌಡ್‌ಡೆಸ್ಕ್‌ನ ಕೃತಕ ಬುದ್ಧಿಮತ್ತೆ ಡಿಜಿಟಲ್ ರಿಸ್ಕ್ ಫ್ಲಾಟ್‌ಫಾರ್ಮ್ ಆಗಿರುವ ಎಕ್ಸ್‌ವಿಜಿಲ್ ಸಂಸ್ಥೆಯು ಏಪ್ರಿಲ್ 10ರಂದು ಪತ್ತೆ ಮಾಡಿತ್ತು.
‘ಹ್ಯಾಕರ್‌ಗಳು ಬ್ರೀಚ್ ಫೋರ್ಂನಲ್ಲಿ ಹಾಕಿದ್ದ ಆರಂಭದ ಪೋಸ್ಟ್‌ನಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಡೇಟಾಬೇಸ್ ಪ್ರವೇಶ ಪಡೆಯಲು 500 ಡಾಲರ್ ಮೊತ್ತವನ್ನು ನಿಗದಿ ಪಡಿಸಿದ್ದರು. ನಂತರ, ಮಾತುಕತೆ ಮೂಲಕ ನಿಗದಿತ ಮೊತ್ತವನ್ನು ಕಡಿತಗೊಳಿಸಲು ಪ್ರಯತ್ನಿಸಿದ್ದರು’ ಎಂದು ಕ್ಲೌಡ್‌ಡೆಸ್ಕ್ ವರದಿಯಲ್ಲಿ ತಿಳಿಸಿದೆ.
‘ದತ್ತಾಂಶ ಬಳಕೆಗೆ ಅನುಮತಿ ಪಡೆದವರಿಗೆ 2,91,212 ಬಳಕೆದಾರರ ದಾಖಲೆಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ. ಆದರೆ, ಇದು ಬಳಕೆದಾರರ ಪಾಸ್‌ವರ್ಡ್‌ಗಳನ್ನು ಒಳಗೊಂಡಿಲ್ಲ’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿತ್ತು.
‘ಜಲಮಂಡಳಿಯ ದತ್ತಾಂಶ ಬಳಕೆಗೆ ಪ್ರವೇಶ ಪಡೆಯವವರು, ಜಲಮಂಡಳಿಯ ನಿರ್ಣಾಯಕ ಕಾರ್ಯಾಚರಣೆಯ ದತ್ತಾಂಶಗಳಾದ (ಕ್ರಿಟಿಕಲ್ ಆಪರೇಷನಲ್ ಡೇಟಾ) ಪಾವತಿ ದಾಖಲೆಗಳು ಅಥವಾ ದೂರು ದಾಖಲೆ ಮತ್ತಿತರ ದತ್ತಾಂಶಗಳನ್ನು ಪರಿಷ್ಕರಿಸಲು ಅಥವಾ ಅಳಿಸಿ ಹಾಕಲು ಅವಕಾಶವಿರುತ್ತದೆ’ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿತ್ತು.
‘ಇವೆಲ್ಲದರ ನಡುವೆ ನಮ್ಮ ದತ್ತಾಂಶ ಸುರಕ್ಷಿತವಾಗಿವೆ. ಅಗತ್ಯವಾದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಜಲಮಂಡಳಿಯ ಮೂಲಗಳು ತಿಳಿಸಿವೆ.
‘ಸಂಪೂರ್ಣ ಬಿಲ್ಲಿಂಗ್ ಡೇಟಾವನ್ನು ಕರ್ನಾಟಕ ಸರ್ಕಾರ ನಿರ್ವಹಿಸುವ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಬಗೆಹರಿದ ನೀರು ಪೂರೈಕೆ ಸಮಸ್ಯೆ
ಮಹದೇವಪುರದ ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ಟ್ರೈಫೆಕ್ಟ ಸ್ಟಾರ್‌ಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ಉಂಟಾಗಿದ್ದ ಕಾವೇರಿ ನೀರು ಪೂರೈಕೆಯ ವ್ಯತ್ಯಯವನ್ನು ಜಲಮಂಡಳಿ ಸರಿಪಡಿಸಿದೆ.
‘172 ಮನೆಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾರಕ್ಕೆ ಎರಡು ದಿನ ಪೂರೈಕೆಯಾಗುವ ಕಾವೇರಿ ನೀರಿನ ಪ್ರಮಾಣ ಕಡಿಮೆ ಇತ್ತು. ಜಲಮಂಡಳಿಯ ನಿಗದಿಯಂತೆ ನಿತ್ಯ ತಲಾವಾರು 200 ಲೀಟರ್ ನೀರು ಪೂರೈಕೆಯಾಗಬೇಕಿತ್ತು. ಆದರೆ 172 ಲೀಟರ್‌ಗಿಂತ ಕಡಿಮೆ ನೀರು ಪೂರೈಕೆಯಾಗುತ್ತಿತ್ತು’ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ದೂರಿದ್ದರು.
ಈ ಕುರಿತು ‘ಪ್ರಜಾವಾಣಿ’ಯ ಏಪ್ರಿಲ್ 17ರ ಸಂಚಿಕೆಯಲ್ಲಿ ‘ಕೋಟಿ ಕೊಟ್ಟರೂ ಮನೆಗೆ ಬಾರದ ಕಾವೇರಿ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಜಲಮಂಡಳಿ ಸಿಬ್ಬಂದಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, ಸಮಸ್ಯೆಯನ್ನು
ಪರಿಹರಿಸಿದ್ದಾರೆ. ‘ಜಲಮಂಡಳಿಯ ಎಂಜಿನಿಯರ್ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈಗ ನೀರು ಪೂರೈಕೆ ಸಾಕಷ್ಟು ಸುಧಾರಿಸಿದೆ’ ಎಂದು ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಷ್ಣುಗಟ್ಟುಪಲ್ಲಿ ಮಾಹಿತಿ ನೀಡಿದರು.
‘ನೀರು ಬರುತ್ತಿದೆ, ಪ್ರಮಾಣ ಕಡಿಮೆ’
ಬೆಂಗಳೂರು: ‘ನಮ್ಮ ಅಪಾರ್ಟ್‌ಮೆಂಟ್‌ಗೆ ನೀರು ಪೂರೈಕೆ ಆರಂಭವಾಗಿದೆ. ಆದರೆ, ಪ್ರಮಾಣ ಕಡಿಮೆ ಇದೆ’ ಎಂದು ವರ್ತೂರು ರಸ್ತೆಯ ಕುಂದನಹಳ್ಳಿ ಗೇಟ್ ಸಮೀಪವಿರುವ ಶ್ರೀರಾಮ್ ಸಮೃದ್ಧಿ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಮಾಹಿತಿ ನೀಡಿದ್ದಾರೆ.
‘2007ರಲ್ಲಿ ಕಾವೇರಿ ಸಂಪರ್ಕ ಪಡೆದಿದ್ದ ಅಪಾರ್ಟ್‌ಮೆಂಟ್‌ಗೆ ನೀರು ಪೂರೈಕೆ ಚೆನ್ನಾಗಿತ್ತು. ಕಾವೇರಿ 5ನೇ ಹಂತ ಯೋಜನೆ ಆರಂಭದ ನಂತರ ವರ್ಷದಿಂದ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ’ ಎಂದು ನಿವಾಸಿಗಳು ದೂರಿದ್ದರು. ಈ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
‘ಸದ್ಯಕ್ಕೆ ಜಲಮಂಡಳಿ ಸಮಸ್ಯೆ ಬಗೆಹರಿಸಿದೆ. ಆದರೆ, ಹಿಂದೆ ಪೂರೈಕೆಯಾಗುತ್ತಿದ್ದಷ್ಟು ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಇದು ಇನ್ನಷ್ಟು ಸುಧಾರಣೆಯಾಗಬೇಕಿದೆ’ ಎಂದು ಅಪಾರ್ಟ್‌ಮೆಂಟ್ ನಿವಾಸಿ ಸಲೀಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.