ADVERTISEMENT

ಉಪಚುನಾವಣೆ: ನಾಲ್ಕು ಕ್ಷೇತ್ರಗಳಲ್ಲಿ 8 ಮಂದಿ ನಾಮಪತ್ರ

ನಾಮಪತ್ರ ಸಲ್ಲಿಕೆ ಪುನರಾರಂಭ: ಮೂರು ಪಕ್ಷಗಳಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಬಿ.ಎಚ್‌.ಅನಿಲ್‌ ಕುಮಾರ್‌
ಬಿ.ಎಚ್‌.ಅನಿಲ್‌ ಕುಮಾರ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಸಂಬಂಧ ಇದುವರೆಗೆ ಒಟ್ಟು ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಗರಲ್ಲಿ ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಬಡಾವಣೆ ಹಾಗೂ ಶಿವಾಜಿನಗರ ವಿಧಾನ ಸಭಾರ ಕ್ಷೇತ್ರಗಳಲ್ಲಿ ಡಿ. 5ರಂದು ನಡೆಯಲಿದೆ. ಈ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಸೋಮವಾರ ಪುನಾರಂಭವಾಗಿದೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಸೋಮವಾರ ಎಂ.ಸಂತೋಷ್‌ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ದೀಪಕ್‌ ಅಲಿಯಾಸ್‌ ವೆಂಕಟೇಶ್ವರ ಮಹಾಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.

ಒಬ್ಬ ವ್ಯಕ್ತಿ ಮೂರು ಪಕ್ಷಗಳಿಂದ ನಾಮಪತ್ರ: ದೀಪಕ್ ಅವರು ಬಿಜೆಪಿ, ಸಿಪಿಐ ಹಾಗೂ ಹಿಂದೂಸ್ತಾನ್‌ ಜನತಾ ಪಾರ್ಟಿ ಹೆಸರುಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಿಜೆಪಿ ಹಾಗೂ ಸಿಪಿಐ ಹೆಸರುಗಳಲ್ಲಿ ಸಲ್ಲಿಸಿರುವ ನಾಮಪತ್ರಕ್ಕೆ ಸೂಚಕರಾಗಲೀ ಅನುಮೋದಕರಾಗಲೀ ಇಲ್ಲ.

ADVERTISEMENT

ಉಪಚುನಾವಣೆ ಮುಂದೂಡುವುದಕ್ಕೂ ಮುನ್ನ ಕೆ.ಆರ್‌.ಪುರ ಕ್ಷೇತ್ರದಲ್ಲಿ ಮೂರು, ಯಶವಂತಪುರ ಕ್ಷೇತ್ರದಲ್ಲಿ ಒಂದು, ಶಿವಾಜಿನಗರ ಕ್ಷೇತ್ರದಲ್ಲಿ ಎರಡು ನಾಮಪತ್ರಗಳು ಸೇರಿ ಒಟ್ಟು 6 ನಾಮಪತ್ರಗಳು ಸಲ್ಲಿಕೆ ಆಗಿದ್ದವು. ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿ ಇದುವರೆಗೆ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ.

ಉಪಚುನಾವಣೆ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ‘ಮಾದರಿ ನೀತಿ ಸಂಹಿತೆ ಜಾರಿಗೆ ಕ್ರಮಕೈಗೊಂಡಿದ್ದೇವೆ. ರಾಜಕೀಯ ಚಟುವಟಿಕೆಮೇಲೆ ನಿಗಾ ಇಡಲು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದರು.

‘ಈ ಬಾರಿ ಮಾದರಿ ನೀತಿಸಂಹಿತೆ ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಸೀಮಿತವಾಗಿರುತ್ತದೆ. ಆದರೆ, ಚುನಾವಣೆ ನಡೆಯುವ ಕ್ಷೇತ್ರಗಳಲ್ಲದೇ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಈ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಸಭೆ ಮಾಡುವಂತಿಲ್ಲ. ಅನ್ಯ ಕಾರ್ಯಕ್ರಮಗಳನ್ನು ನಡೆಸಲು ಅಡ್ಡಿ ಇಲ್ಲ. ಯಾವುದೇ ಅಭ್ಯರ್ಥಿಗಳು ಪಕ್ಕದ ಕ್ಷೇತ್ರದಲ್ಲಿ ಸಮಾರಂಭ ಮಾಡಿದರೆ ಚುನಾವಣಾ ಆಯೋಗದ ನಿರ್ದೇಶನ ಪಡೆದು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ನಾಮಪತ್ರ ಸಲ್ಲಿಕೆಗೆ ಇದೇ 18 ಕೊನೆಯ ದಿನ. ಅಲ್ಲಿಯವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. ಈ ಬಾರಿ ನಾವು ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿಲ್ಲ’ ಎಂದರು.

‘ಮತ ಎಣಿಕೆ ಎಲ್ಲಿ ನಡೆಸಬೇಕೆಂದು ಇನ್ನೂ ತೀರ್ಮಾನಿಸಿಲ್ಲ. ಚುನಾವಣಾ ಆಯೋಗವು ವೀಕ್ಷಕರನ್ನು ಕಳುಹಿಸಲಿದೆ. ಅವರ ಜೊತೆ ಹಾಗೂ ಪೊಲೀಸ್‌ ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ. ತಪಾಸಣಾ ಕೇಂದ್ರಗಳ ಸ್ಥಾಪನೆ ಮತ್ತು ಮತಗಟ್ಟೆಯ ಸೂಕ್ಷ್ಮತೆ ನೋಡಿಕೊಂಡು ಆ ಪ್ರಕಾರ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಬಗ್ಗೆಯೂ ನಿರ್ಧರಿಸುತ್ತೇವೆ’ ಎಂದರು.

‘ಇದುವರೆಗೆ ನಮೂನೆ 6ರರಲ್ಲಿ ಹೊಸ ಸೇರ್ಪಡೆಗೆ 50,862 ಹೊಸ ಅರ್ಜಿಗಳು ಬಂದಿವೆ. 29,765 ಅರ್ಜಿಗಳು ಸ್ವೀಕೃತವಾಗಿದ್ದು, 9,511 ಪರಿಶೀಲನೆಯಲ್ಲಿವೆ. 959 ತಿರಸ್ಕೃತಗೊಂಡಿವೆ’ ಎಂದರು.

‘ಬಾಂಗ್ಲಾ ‍ಪ್ರಜೆಗಳ ಹೆಸರು–ದೂರು ಬಂದಿಲ್ಲ’

‘ಉಪ ಚುನಾವಣೆ ನಡೆಯುವ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಬಾಂಗ್ಲಾದೇಶದ ವಲಸಿಗರ ಹೆಸರು ಸೇರ್ಪಡೆಗೊಂಡಿರುವ ಕುರಿತು ನಮಗೆ ಇದುವರೆಗೆ ಯಾರಿಂದಲೂ ದೂರು ಬಂದಿಲ್ಲ. ಈ ಕುರಿತು ಪೊಲೀಸ್‌ ಅಧಿಕಾರಿಗಳು ನೀಡಿರುವ ಹೇಳಿಕೆ ಬಗ್ಗೆ ಪತ್ರಿಕೆಗಳಲ್ಲಿ ಬಂದ ಮಾಹಿತಿ ಅಷ್ಟೇ ನಮಗೆ ಗೊತ್ತು. ಪೊಲೀಸ್‌ ಆಯುಕ್ತರು ನಮ್ಮಿಂದ ಈ ಕುರಿತ ಮಾಹಿತಿ ಕೇಳಿಲ್ಲ’ ಎಂದು ಅನಿಲ್ ಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

***

ಉ‍ಪಚುನಾವಣೆ: ಚುನಾವಣಾ ಕಚೇರಿ ಎಲ್ಲಿ?

ಕ್ಷೇತ್ರ ಸ್ಥಳ ಚುನಾವಣಾಧಿಕಾರಿ

ಕೆ.ಆರ್‌.ಪುರ ಜಯನಗರ 2ನೇ ಬ್ಲಾಕ್‌ ಬಿಬಿಎಂಪಿ ಸಂಕೀರ್ಣ ಕೆ.ಆರ್‌.ಪುರ ರಾಮಚಂದ್ರನ್‌

ಯಶವಂತಪುರ ವಿ.ವಿ.ಗೋಪುರ ಕಟ್ಟಡ ಎ.ನವೀನ್‌ ಜೋಸೆಪ್‌

ಮಹಾಲಕ್ಷ್ಮೀ ಲೇಔಟ್‌ ಜಯನಗರ 2ನೇ ಬ್ಲಾಕ್‌ ಬಿಬಿಎಂಲಿ ಸಂಕೀರ್ಣ ಆಶಾ

ಶಿವಾಜಿನಗರ ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣ ಕಟ್ಟಡ ಬಸವೇಶಶ್ವರನಗರಜಿ.ಬಿ.ನಟೇಶ್‌

***

ಅಂಕಿ ಅಂಶ

1361 – ನಾಲ್ಕು ಕ್ಷೇತ್ರಗಳಲ್ಲಿರುವ ಒಟ್ಟು ಮತಗಟ್ಟೆಗಳು

5,988 – ಚುನಾವಣಾ ಸಿಬ್ಬಂದಿ

1950 – ಉಪಚುನಾವಣೆಯ ಸಹಾಯವಾಣಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.