ADVERTISEMENT

ಸರಕು ವಾಹನ: ಮಕ್ಕಳ ಪ್ರಯಾಣಕ್ಕೆ ಅಂಕುಶ

ಡಿ.ಸಿಗಳಿಗೆ ಮುಖ್ಯಕಾರ್ಯದರ್ಶಿ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:35 IST
Last Updated 30 ಏಪ್ರಿಲ್ 2019, 20:35 IST
ಟಿ.ಎಂ. ವಿಜಯಭಾಸ್ಕರ್‌
ಟಿ.ಎಂ. ವಿಜಯಭಾಸ್ಕರ್‌   

ಬೆಂಗಳೂರು: ಸರಕು ಸಾಗಣೆಯ ವಾಹನಗಳಲ್ಲಿ ಶಾಲಾ ಮಕ್ಕಳು, ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರ ಅಪಾಯಕಾರಿ ರೀತಿಯ ಸಂಚಾರ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಾಕೀತು ಮಾಡಿದರು.

ಪ್ರಯಾಣಿಕರನ್ನು ಅಪಾಯಕಾರಿ ರೀತಿಯಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯ ಕಾರ್ಯದರ್ಶಿ ಅವರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು.

ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ನೋಂದಣಿ ಪ್ರಮಾಣ ಪತ್ರ ಹಾಗೂ ಪರವಾನಗಿಯನ್ನು ರದ್ದುಪಡಿಸಬೇಕು. ಆ ವಾಹನಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಈ ಸಾರಿಗೆ ವ್ಯವಸ್ಥೆಯನ್ನು ತಡೆಗಟ್ಟಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳು ಮೇ 20ರೊಳಗೆ ಕ್ರಿಯಾ ಯೋಜನೆಗಳನ್ನು ರೂಪಿಸಿ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಯಾವ ಭಾಗದಲ್ಲಿ ಸಾರಿಗೆ ಸೌಲಭ್ಯದ ಕೊರತೆ ಇದೆ ಎಂಬುದನ್ನು ಜಿಲ್ಲಾ ಸಾರಿಗೆ ಪ್ರಾಧಿಕಾರಿಗಳು ಇಲಾಖಾ ಸಿಬ್ಬಂದಿ ಮೂಲಕ ಗುರುತಿಸಬೇಕು. ಅಂತಹ ಭಾಗದಲ್ಲಿ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸಲು ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.

ಗಾರ್ಮೆಂಟ್ಸ್‌ ಕಾರ್ಮಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಕಡಿಮೆ ದರದಲ್ಲಿ ಸಾಗಣೆ ವ್ಯವಸ್ಥೆಗಾಗಿ ಕಾರ್ಮಿಕ ಇಲಾಖೆಯ ಸಂಯೋಜನೆಯೊಂದಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿದರು.

ಸರಕು ಸಾಗಣಾ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರ ಎಂಬ ಸಂದೇಶ ಹೊತ್ತ ಫಲಕಗಳನ್ನು ಸಾರಿಗೆ ನಿಗಮಗಳ ಬಸ್‌ಗಳ ಹಿಂಬದಿಯಲ್ಲಿ ಅಳವಡಿಸಬೇಕು. ಜಿಲ್ಲಾಧಿಕಾರಿಗಳು 15 ದಿನಗಳಿಗೊಮ್ಮೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಗಳನ್ನು ನಡೆಸಿ ವರದಿಗಳನ್ನು ಪ್ರತಿ ತಿಂಗಳು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಪಾಲಿಕೆ ಸಿಬ್ಬಂದಿ, ವಿಶೇಷವಾಗಿ ಪೌರ ಕಾರ್ಮಿಕರು ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಪಾಲಿಕೆಯಿಂದ ಪ್ರತ್ಯೇಕವಾದ ಕ್ರಿಯಾ ಯೋಜನೆಯನ್ನು ರೂಪಿಸಿ ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.