ADVERTISEMENT

ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಚಾಲಕನ ಸುಲಿಗೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 17:25 IST
Last Updated 16 ಏಪ್ರಿಲ್ 2022, 17:25 IST
   

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಕರೆಸಿಕೊಂಡು, ಚಾಲಕನನ್ನು ಸುಲಿಗೆ ಮಾಡಿದ್ದ ಆರೋಪದಡಿ ನಾಲ್ವರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಲೇಔಟ್‌ ಲಕ್ಷ್ಮಿದೇವಿನಗರ ನಿವಾಸಿ ಹೃತಿಕ್ ಗೌಡ (20), ಸಂಪಿಗೆಹಳ್ಳಿ ವೆಂಕಟೇಶ್ವರನಗರದ ನಿತಿನ್‌ಗೌಡ (21), ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟದ ಇ.ಕೆ. ಸುಮಂತ್ (20) ಹಾಗೂ ಕಲ್ಲನಾಥಪುರದ ಎಸ್‌. ದರ್ಶನ್ ಬಂಧಿತರು. ಇವರಿಂದ ಮಾರುತಿ ಸ್ವಿಫ್ಟ್‌ ಕಾರು ಹಾಗೂ ಬಜಾಜ್ ಪಲ್ಸರ್ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಂಪಿಗೆಹಳ್ಳಿಯ ಶಿವರಾಮ ಕಾರಂತ ನಗರ ಕ್ಲಬ್‌ ಬಳಿ ಏಪ್ರಿಲ್ 1ರಂದು ಆರೋಪಿಗಳು ಬಂದಿದ್ದರು. ಉಬರ್ ಆ್ಯಪ್‌ನಲ್ಲಿ ಕ್ಯಾಬ್ ಕಾಯ್ದಿರಿಸಿದ್ದರು. ಸ್ಥಳಕ್ಕೆ ಬಂದ ಕ್ಯಾಬ್‌ ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು, ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿದ್ದರು.’

ADVERTISEMENT

‘ಚಾಲಕನನ್ನು ಕ್ಯಾಬ್‌ನಿಂದ ಇಳಿಸಿದ್ದ ಆರೋಪಿಗಳು, ರಸ್ತೆಗೆ ತಳ್ಳಿದ್ದರು. ನಂತರ, ಕ್ಯಾಬ್ ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಚಾಲಕ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ದುಶ್ಚಟಗಳಿಗೆ ಹಣ ಹೊಂದಿಸಲು ಆರೋಪಿಗಳು ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.