ADVERTISEMENT

ಸಂಪುಟ ಸಭೆ: ಚುನಾವಣೆ ಗೆಲುವಿನ ಅಲೆ ಸೃಷ್ಟಿಸಲು ಸಕ್ರಿಯವಾಗಿ ತೊಡಗಬೇಕು- ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 21:30 IST
Last Updated 27 ಜನವರಿ 2022, 21:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಗೆಲುವಿನ ಅಲೆ ಸೃಷ್ಟಿಸಬೇಕು. ಅದಕ್ಕಾಗಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದರು.

ವಿಧಾನಸಭಾ ಚುನಾವಣೆ ಗೆಲ್ಲಬೇಕಾದರೆ ಜನರಲ್ಲಿ ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡಿಸಬೇಕು. ಈ ಕಾರ್ಯ ಬಿಬಿಎಂಪಿ ಮತ್ತು ಪಂಚಾಯಿತಿ ಚುನಾವಣೆಗಳಲ್ಲೇ ಮಾಡಬೇಕಾಗಿದೆ. ಅದು ವಿಧಾನಸಭಾ ಚುನಾವಣೆಗೆ ಅಡಿಪಾಯವಾಗಬಲ್ಲದು ಎಂದು ಹೇಳಿದರು.

ಮೂರು ಗಂಟೆಗೂ ಹೆಚ್ಚು ಸಮಯ ನಡೆದ ಸಂಪುಟ ಸಭೆಯಲ್ಲಿ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಿಬಿಎಂಪಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ಗೆದ್ದು ಅಧಿಕಾರ ಹಿಡಿಯಬೇಕು. ಇದಕ್ಕೆ ಬೆಂಗಳೂರು ಮಾತ್ರವಲ್ಲ ಇತರ ಜಿಲ್ಲೆಗಳ ಸಚಿವರು ಜವಾಬ್ದಾರಿ ಹೊರಬೇಕು. ಇತರ ಜಿಲ್ಲೆಗಳ ಪ್ರಭಾವಿ ಶಾಸಕರು ಬೀಡು ಬಿಟ್ಟು ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದೇ ರೀತಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬೆಂಗಳೂರು ಸಚಿವರು ಹೋಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಿಬಿಎಂಪಿಗೆ ಯಾವುದೇ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ತಕ್ಷಣವೇ ಸಿದ್ಧತೆ ನಡೆಸಿಕೊಳ್ಳಬೇಕು. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಪೈಪೋಟಿ ಎದುರಾಗುತ್ತದೆ. ನಮ್ಮ ಗುರಿ ಮತ್ತು ಶ್ರಮ ಸ್ಪಷ್ಟವಾಗಿರಬೇಕು ಎಂದು ಬೊಮ್ಮಾಯಿ ಹೇಳಿದರು ಎನ್ನಲಾಗಿದೆ.

‘ನಮ್ಮಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ವಿರೋಧಿ ಶಕ್ತಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋಗುತ್ತಾರೆ ಎಂಬ ವದಂತಿಯೂ ಆ ಪಿತೂರಿಯ ಭಾಗ. ಚುನಾವಣೆ ಸಂದರ್ಭದಲ್ಲಿ ವಿಚಲಿತರಾಗಬಾರದು’ ಎಂದು ಬೊಮ್ಮಾಯಿಹೇಳಿದರು.

ವರ್ತೂರು ಎಲಿವೇಟೆಡ್‌ ರಸ್ತೆಗೆ ₹482 ಕೋಟಿ

ಬೆಂಗಳೂರು: ವರ್ತೂರು ಬಳಿ 1.3 ಕಿ.ಮೀ ಎಲಿವೇಟೆಡ್‌ ರಸ್ತೆಯನ್ನು 1.92 ಕಿ.ಮೀ ವಿಸ್ತರಿಸುವ ₹482 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅಲ್ಲದೆ, ಈ ರಸ್ತೆಯ ಅಗಲವನ್ನು 100 ಅಡಿಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾ. ಕೆ.ಶಿವರಾಮಕಾರಂತ ಬಡಾವಣೆಗಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಯಲಹಂಕ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. ವ್ಯಾಜ್ಯ ರಹಿತ 67.17 ಎಕರೆ ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದೆ ಎಂದರು.

ಸುಮಾರು 400 ಎಕರೆ ಜಮೀನು ಇದ್ದು, 67.17 ಎಕರೆ ಬಿಟ್ಟು ಉಳಿದದ್ದರಲ್ಲಿ ಕೆಲವು ವ್ಯಾಜ್ಯಗಳಿಂದ ಕೂಡಿವೆ. ಸರ್ಕಾರ ನೀಡಲಿರುವ ಜಮೀನಿನಲ್ಲಿ ನಿವೇಶನಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ಜಿಲ್ಲೆಯ ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರ್ಕಾರಿ ಜಮೀನನ್ನು ರಾಜ್ಯ ಗುಪ್ತ ವಾರ್ತೆ ಘಟಕದ ತರಬೇತಿ ಅಕಾಡೆಮಿಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಒಳಾಡಳಿತ ಇಲಾಖೆಗೆ ಉಚಿತವಾಗಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.