ADVERTISEMENT

ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ 38ರಷ್ಟು ಮಾತ್ರ ಅನುದಾನ: ಸಿಎಜಿ ವರದಿ

ಸಿಎಜಿ ವರದಿ: ₹ 44,691 ಕೋಟಿ ಭರವಸೆ : ಕೊಟ್ಟಿದ್ದು ₹ 17,119 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 1:54 IST
Last Updated 24 ಸೆಪ್ಟೆಂಬರ್ 2020, 1:54 IST

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನಂತೆ ದೊರೆಯಬೇಕಿದ್ದ ಅನುದಾನದ ಪೈಕಿ ಶೇ 38.30ರಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಹೇಳಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಈ ವರದಿಯನ್ನು ಮಂಡಿಸಲಾಯಿತು. 2014–15ರಿಂದ 2018–19ರ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ₹44,691.04 ಕೋಟಿ ಅನುದಾನವನ್ನು ನೀಡಬೇಕಿತ್ತು. ಆದರೆ, ವಾಸ್ತವಿಕವಾಗಿ ₹17,119.02 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ ₹12,007.65 ಕೋಟಿಯನ್ನು ಅಂಗಸಂಸ್ಥೆಗಳ ಸಾಲ ಪಾವತಿಗಾಗಿ ಕಡಿತ ಮಾಡಲಾಗಿತ್ತು. ಈ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆಯಲ್ಲಿ ₹ 15,564 ಕೋಟಿಯಷ್ಟು ಕೊರತೆ ಇತ್ತು ಎಂಬ ಉಲ್ಲೇಖ ವರದಿಯಲ್ಲಿದೆ.

ನಾಲ್ಕನೇ ರಾಜ್ಯ ಹಣಕಾಸು ಆಯೋಗದ ರಚನೆಯಲ್ಲಿ ವಿಳಂಬವಾಗಿದ್ದ ಕಾರಣದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ 2016–17ರಲ್ಲಿ ₹ 443.68 ಕೋಟಿ, 2017–18ರಲ್ಲಿ ₹ 936.07 ಕೋಟಿ ಮತ್ತು 2018–19ರಲ್ಲಿ ₹1,036.03 ಕೋಟಿಯಷ್ಟು ಅನುದಾನದ ನಷ್ಟವಾಗಿದೆ. 2014–15ರಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಶೇ 53ರಷ್ಟು ಬಿಡುಗಡೆಯಾಗಿದ್ದರೆ, 2017–18ರಲ್ಲಿ ಈ ಮೊತ್ತ ಶೇ 20ರಷ್ಟಿತ್ತು ಎಂಬುದು ಬಹಿರಂಗವಾಗಿದೆ.

ADVERTISEMENT

2019ರ ಮಾರ್ಚ್‌ ಅಂತ್ಯದಲ್ಲಿ 271 ನಗರ ಸ್ಥಳೀಯ ಸಂಸ್ಥೆಗಳಲ್ಲಿ ₹ 503.09 ಕೋಟಿ ಆಸ್ತಿ ತೆರಿಗೆ ಬಾಕಿ ಇತ್ತು. 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಣಿಜ್ಯ ಸಂಸ್ಥೆಗಳಿಂದ ₹ 21.39 ಕೋಟಿ ಕಟ್ಟಡ ಬಾಡಿಗೆ ಬಾಕಿ ಇತ್ತು. 2013–14ರಲ್ಲಿ ನೀರನ ಕರದ ಬಾಕಿ ₹ 98.75 ಕೋಟಿ ಇತ್ತು. 2018–19ರ ಅಂತ್ಯದಲ್ಲಿ ಅದು ₹ 209.15 ಕೋಟಿಗೆ ಹೆಚ್ಚಿತ್ತು. ಇದು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಆದಾಯವನ್ನು ವೃದ್ಧಿಸಿಕೊಳ್ಳಲು ಪರಿಣಾಮಕಾರಿ ಪ್ರಯತ್ನ ನಡೆಸಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಸಿಎಜಿ ಹೇಳಿದೆ.

ಶೇ 31ರಷ್ಟು ಹುದ್ದೆ ಖಾಲಿ: ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ 56,493 ಮಂಜೂರಾದ ಹುದ್ದೆಗಳಿದ್ದವು. ಈ ಪೈಕಿ ಶೇ 31ರಷ್ಟು (17,480) ಖಾಲಿ ಇದ್ದವು. 19,105 ಹುದ್ದೆಗಳನ್ನು ನೇಮಕಾತಿಯಿಂದ ತುಂಬಿದ್ದರೆ, 1,330 ಹುದ್ದೆಗಳನ್ನು ನಿಯೋಜನೆಯಿಂದ ಭರ್ತಿ ಮಾಡಲಾಗಿತ್ತು. 18,578 ಅಧಿಕಾರಿಗಳು, ಸಿಬ್ಬಂದಿ ಹೊರ ಗುತ್ತಿಗೆ ಮತ್ತು ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ವರದಿಯಲ್ಲಿದೆ.

ದುರ್ಬಲ ಮೇಯರ್‌
ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ಮೇಯರ್‌ಗಳ ಅವಧಿ ಒಂದು ವರ್ಷ. ಇತರ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅವಧಿ 30 ತಿಂಗಳು ಇದೆ. ದೇಶದ 16 ನಗರಗಳಲ್ಲಿ ಮೇಯರ್‌ಗಳ ಅಧಿಕಾರದ ಅವಧಿ 5 ವರ್ಷ. ಈ ನಗರಗಳಿಗೆ ಹೋಲಿಸಿದರೆ ಕರ್ನಾಟಕದ ಮೇಯರ್‌ಗಳು ದುರ್ಬಲರಾಗಿದ್ದಾರೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಯಾವುದೇ ಮಹಾನಗರ ಪಾಲಿಕೆಗಳು ವಾರ್ಡ್‌ ಸಮಿತಿಗಳನ್ನು ರಚಿಸಿರಲಿಲ್ಲ. ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಇದು ಸೋಲಿಸಿತು ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.