ADVERTISEMENT

ಕಾಲ್‌ಗರ್ಲ್ ಕರೆಸಿ ₹ 97 ಸಾವಿರ ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 16:06 IST
Last Updated 17 ನವೆಂಬರ್ 2020, 16:06 IST

ಬೆಂಗಳೂರು: ಆನ್‌ಲೈನ್‌ ಜಾಹೀರಾತು ನೋಡಿ ಕಾಲ್‌ಗರ್ಲ್‌ ಒಬ್ಬರನ್ನು ಮನೆಗೆ ಕರೆಸಿದ್ದ ನಗರದ ನಿವಾಸಿಯೊಬ್ಬ ₹ 97 ಸಾವಿರ ಕಳೆದುಕೊಂಡಿದ್ದು, ಈ ಸಂಬಂಧ ವೈಟ್‌ಫೀಲ್ಟ್‌ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಕಳೆದುಕೊಂಡ ಬಗ್ಗೆ ಖಾಸಗಿ ಕಂಪನಿ ಉದ್ಯೋಗಿಯಾದ ವ್ಯಕ್ತಿ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆ ಹಾಗೂ ಆಕೆಯ ವ್ಯವಸ್ಥಾಪಕ ಎನ್ನಲಾದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಾಲ್‌ಗರ್ಲ್‌ ಸಿಗುವುದಾಗಿ ಮೊಬೈಲ್ ಆ್ಯಪೊಂದರಲ್ಲಿ ಜಾಹೀರಾತು ಬಂದಿತ್ತು. ಅದನ್ನು ನೋಡಿ ಕರೆ ಮಾಡಿದ್ದ ದೂರುದಾರ, ₹10 ಸಾವಿರ ಮುಖಂಡವಾಗಿ ಪಾವತಿಸಿ ಮಹಿಳೆಯೊಬ್ಬರನ್ನು ಮನೆಗೆ ಕರೆಸಿಕೊಂಡು ರಾತ್ರಿ ಕಳೆದಿದ್ದ. ತಾನೊಂದು ಸ್ವಯಂಸೇವಾ ಸಂಘಟನೆ ನಡೆಸುತ್ತಿರುವುದಾಗಿ ಹೇಳಿದ್ದ ಮಹಿಳೆ, ಅದಕ್ಕೆ ದೇಣಿಗೆ ನೀಡುವಂತೆ ಒತ್ತಾಯಿಸಿದ್ದಳು. ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಳು.’

ADVERTISEMENT

‘ಮಹಿಳೆಯ ವ್ಯವಸ್ಥಾಪಕನೆಂದು ಕರೆ ಮಾಡಿದ್ದ ಮತ್ತೊಬ್ಬ ಆರೋಪಿ ಸಹ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೆದರಿದ ದೂರುದಾರ, ಆರೋಪಿಗಳು ನೀಡಿದ್ದ ಖಾತೆಗೆ ಹಂತ ಹಂತವಾಗಿ ₹ 97 ಸಾವಿರ ಹಾಕಿದ್ದಾರೆ. ಅದಾದ ನಂತರ ಮಹಿಳೆ ನಾಪತ್ತೆಯಾಗಿದ್ದಾಳೆ. ಮೊಬೈಲ್ ನಂಬರ್ ಆಧರಿಸಿ ಆಕೆಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಪೊಲೀಸರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.