ADVERTISEMENT

ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಪ್ರತಿಮೆ nನಿರ್ಮಾಣಕ್ಕೆ ನೀಡಿದ್ದ ಅನುಮತಿ ರದ್ದು

ಮೈಸೂರಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಪ್ರತಿಮೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 19:30 IST
Last Updated 7 ಸೆಪ್ಟೆಂಬರ್ 2021, 19:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮೈಸೂರು ನಗರದ ಗನ್ ಹೌಸ್ ಬಳಿಯ ವೃತ್ತದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

2017ರಲ್ಲಿ ನೀಡಿರುವ ಈ ಅನುಮತಿ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂದು ಪೀಠ ಹೇಳಿದೆ.

‘ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳ ಮೈಸೂರು ನಗರದ ಜನನಿಬಿಡ ಪ್ರದೇಶ ಎಂಬುದು ರಾಜ್ಯ ಸರ್ಕಾರವೇ ಸಲ್ಲಿಸಿರುವ ನಕ್ಷೆಯಿಂದ ಸ್ಪಷ್ಟವಾಗುತ್ತದೆ. ಈ ವೃತ್ತಕ್ಕೆ ಆರು ರಸ್ತೆಗಳು ಸೇರುತ್ತವೆ. ವೃತ್ತ ಕೂಡ ರಸ್ತೆಯ ಭಾಗವಾಗಿದೆ’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ADVERTISEMENT

‘ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿಮೆ ಸ್ಥಾಪಿಸಲು ಅಥವಾ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಗಳಿಗೆಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಆದ್ದರಿಂದ, ಸರ್ಕಾರದ ಅನುಮತಿ ಮತ್ತುಮೈಸೂರು ಮಹಾನಗರ ಪಾಲಿಕೆ ಕೈಗೊಂಡ ನಿರ್ಣಯವನ್ನು ಪರಿಗಣಿಸಲಾಗದು’ ಎಂದು ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅಖಿಲ ಭಾರತ ಕ್ಷತ್ರಿಯ ಮಹಾಸಭಾ, ‘ಶ್ರೀಕಂಠದತ್ತ ನರಸಿಂಹ
ರಾಜ ಒಡೆಯರ್ ಪ್ರತಿಮೆ ಸ್ಥಾಪಿಸಲು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ತಿರಸ್ಕರಿಸಿತ್ತು. ಈಗ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪ್ರತಿಮೆ ಸ್ಥಾಪನೆಗೆ ಅದೇ ಸರ್ಕಾರ ಅನುಮತಿ ನೀಡಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

‘ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ ಮತ್ತು ಇತರ ಸಾರ್ವಜನಿಕ ಉಪಯುಕ್ತ ಸ್ಥಳಗಳಲ್ಲಿ ಯಾವುದೇ ಪ್ರತಿಮೆ ನಿರ್ಮಿಸದಂತೆ ಸುಪ್ರೀಂ ಕೋರ್ಟ್‌ 2013ರಲ್ಲಿ ನಿರ್ದೇಶನ ನೀಡಿದೆ. ಅದನ್ನು ರಾಜ್ಯದೆಲ್ಲೆಡೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.