ADVERTISEMENT

ಬೆಂಗಳೂರು | ಕಾರಿಗೆ ಲಾರಿ ಡಿಕ್ಕಿ: ಗಾಯಗೊಂಡಿದ್ದ PSI ಮೆಹಬೂಬ್‌ ಗುಡ್ಡಳ್ಳಿ ಸಾವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:49 IST
Last Updated 29 ಜೂನ್ 2025, 15:49 IST
<div class="paragraphs"><p>ಮೆಹಬೂಬ್ ಗುಡ್ಡಳ್ಳಿ</p></div>

ಮೆಹಬೂಬ್ ಗುಡ್ಡಳ್ಳಿ

   

ಬೆಂಗಳೂರು: ಗಾಂಜಾ ಸಂಗ್ರಹಿಸಿದ್ದ ಸ್ಥಳಕ್ಕೆ ಆರೋಪಿಗಳನ್ನು ಕಾರಿನಲ್ಲಿ ಕರೆದೊಯ್ಯವ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಲಘಟ್ಟಪುರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಮೆಹಬೂಬ್‌ ಗುಡ್ಡಳ್ಳಿ(39) ಅವರು ಭಾನುವಾರ ಮೃತಪಟ್ಟಿದ್ದಾರೆ.

ಜೂನ್ 23ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ಮೈಬೂಬ್ ಗುಡ್ಡಳ್ಳಿ, ಹೆಡ್‌ಕಾನ್‌ಸ್ಟೆಬಲ್ ತುಳಿಸಿದಾಸ್, ಕಾನ್‌ಸ್ಟೆಬಲ್‌ಗಳಾದ ದಾವುದ್ ಸಾಬ್, ಸಣ್ಣ ಜಡಿಯಪ್ಪ, ಗವಿಸಿದ್ದಪ್ಪ ಮತ್ತು  ಹೊನಪ್ಪ ಅಗಸನಮಟ್ಟಿ ಅವರು ಖಚಿತ ಮಾಹಿತಿ ಆಧರಿಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ತಿಲಕ್ ನಗರಕ್ಕೆ ತೆರಳಿದ್ದರು.

ಅಲ್ಲಿ ಅನುಮಾನಸ್ಪದವಾಗಿ ಕಾರಿನಲ್ಲಿದ್ದ ವಸೀಂ, ಅಜರ್, ಅಮೀರ್‌ ಅವರನ್ನು ಬಂಧಿಸಿ, ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಅವರು ನೀಡಿದ ಮಾಹಿತಿ ಮೇರೆಗೆ ಗಾಂಜಾ ಸಂಗ್ರಹ ಮಾಡಿದ್ದ ಸ್ಥಳಕ್ಕೆ ವಸೀಂ ಮತ್ತು ಅಮೀರ್ ಅವರನ್ನು ಅವರ ಕಾರಿನಲ್ಲಿಯೇ ಕರೆದುಕೊಂಡು ಪೊಲೀಸರು ಹೊರಟಿದ್ದಾರೆ. ಅತ್ತಿಬೆಲೆ ಮಾರ್ಗವಾಗಿ ಹೋಗುವಾಗ ಯಲ್ಲಮ್ಮನಗರ ಬಳಿಕ ಕಾರಿನ ಎಡಚಕ್ರ ಕಳಚಿಹೋಯಿತು.

ADVERTISEMENT

ಚಾಲನೆ ಮಾಡುತ್ತಿದ್ದ ಪೊಲೀಸ್‌ ಸಣ್ಣ ಜಡಿಯಪ್ಪ ಅವರು ಕಾರು ನಿಲ್ಲಿಸಿ, ಚಕ್ರ ಹುಡುಕಲು ಹೊರಟರು. ಈ ವೇಳೆ ಕಾರಿನಿಂದ ಹೊರಗೆ ಬಂದ ಪಿಎಸ್‌ಐ, ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತದ ಬಳಿಕ ಕಾರಿನ ಒಳಗಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೈಬೂಬ್ ಗುಡ್ಡಳ್ಳಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಹೆಡ್‌ಕಾನ್‌ಸ್ಟೆಬಲ್ ತುಳಿಸಿದಾಸ್, ‘ಅಪಘಾತ ಮಾಡಿದ ಲಾರಿ ಚಾಲಕ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೈಕೋಳ ಸಮೇತ ಪರಾರಿಯಾಗಿರುವ ವಸೀಂ ಮತ್ತು ಅಮೀರ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.