ADVERTISEMENT

ಬಾಡಿಗೆ ನೆಪದಲ್ಲಿ ಕಾರು ಕದ್ದಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:24 IST
Last Updated 7 ಜನವರಿ 2020, 19:24 IST

ಬೆಂಗಳೂರು: ಬಾಡಿಗೆ ಪಡೆಯುವ ನೆಪದಲ್ಲಿ ಕಾರೊಂದನ್ನು ಕಳ್ಳತನ ಮಾಡಿದ್ದ ಆರೋಪದಡಿ ಕರಣ್‌ಕುಮಾರ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

‘ಕತ್ರಿಗುಪ್ಪೆ ನಿವಾಸಿ ಕರಣ್‌ಕುಮಾರ್ ಜ. 1ರಂದು ದಾಸನಪುರದ ಅರುಣ್‌ಕುಮಾರ್ ಎಂಬುವರ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕರಣ್‌ನನ್ನು ಬಂಧಿಸಿ, ಆತನಿಂದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅರುಣ್‌ಕುಮಾರ್ ಅವರು ಟ್ರಾವೆಲ್ಸ್ ಏಜೆನ್ಸಿಯಡಿ ಕಾರು ಓಡಿಸುತ್ತಿದ್ದಾರೆ. ಜಸ್ಟ್ ಡಯಲ್ ಜಾಲತಾಣದಿಂದ ಮಾಹಿತಿ ಪಡೆದುಕೊಂಡು ಏಜೆನ್ಸಿಯವರನ್ನು ಸಂಪರ್ಕಿಸಿದ್ದ ಆರೋಪಿ, ಮೈಸೂರು ಪ್ರವಾಸಕ್ಕೆ ಹೋಗಲು ಕಾರು ಬಾಡಿಗೆಗೆ ಬೇಕೆಂದು ಹೇಳಿದ್ದ. ಏಜೆನ್ಸಿಯವರು ಅರುಣ್‌ಕುಮಾರ್ ಅವರನ್ನು ಕಾರು ಸಮೇತ ಆರೋಪಿ ಹೇಳಿದ್ದ ಸ್ಥಳಕ್ಕೆ ಕಳುಹಿಸಿದ್ದರು.’

ADVERTISEMENT

‘ಮೈಸೂರು ರಸ್ತೆಯ ಹೋಟೆಲೊಂದರ ಬಳಿ ಅರುಣ್‌ಕುಮಾರ್ ಅವರನ್ನು ಭೇಟಿಯಾಗಿ ಕಾರಿನೊಳಗೆ ಕುಳಿತಿದ್ದ ಆರೋಪಿ, ‘ಹೋಟೆಲ್‌ನಲ್ಲಿ ನನ್ನ ಸ್ನೇಹಿತ ಇದ್ದಾನೆ. ಆತ ₹10 ಸಾವಿರ ಕೊಡುತ್ತಾನೆ. ತೆಗೆದುಕೊಂಡು ಬಾ’ ಎಂದು ಹೇಳಿ ಕಳುಹಿಸಿದ್ದ. ಅತ್ತ ಅರುಣ್‌ಕುಮಾರ್ ಹೋಟೆಲ್ ಒಳಗೆ ಹೋಗುತ್ತಿದ್ದಂತೆ ಕಾರಿನ ಸಮೇತ ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಎರಡು ಕಡೆ ಕೃತ್ಯ: ‘ಅರುಣ್‌ಕುಮಾರ್ ಅವರ ₹22 ಲಕ್ಷ ಮೌಲ್ಯದ ಕಾರು ಕದ್ದಿದ್ದ ಆರೋಪಿ ಕರಣ್‌ಕುಮಾರ್, ಅದೇ ದಿನ ಮತ್ತೊಂದು ಕಾರು ಕದ್ದಿದ್ದಾನೆ. ಎರಡೂ ಕಾರನ್ನು ಮಾರಾಟ ಮಾಡಲೆಂದು ತುಮಕೂರಿನಲ್ಲಿ ಇಟ್ಟಿದ್ದ. ಅವುಗಳನ್ನೇ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.