
ಬೆಂಗಳೂರು: ಅಂಗವಿಕಲರನ್ನು ಆರೈಕೆ ಮಾಡುವವರ ಶ್ರೇಯೋಭಿವೃದ್ಧಿಗೆ ಸರ್ಕಾರ ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ತಿಳಿಸಿದರು.
ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಉದ್ದಾಟಿಸಿ ಅವರು ಮಾತನಾಡಿದರು.
ಅಂಗವಿಕಲರನ್ನು, ನಿಧಾನ ಕಲಿಕೆಯ ಮಕ್ಕಳನ್ನು ಆರೈಕೆ ಮಾಡುವುದು ಸುಲಭದ ಮಾತಲ್ಲ. ಅವರನ್ನು ನೋಡಿಕೊಳ್ಳುವುದರಲ್ಲೇ ಜೀವನ ಸವೆದು ಹೋಗುತ್ತದೆ. ವೈಯಕ್ತಿಕ ಜೀವನದ ನಲಿವನ್ನು ಈ ಮಕ್ಕಳಿಗಾಗಿ ಆರೈಕೆದಾರರು ಮುಡಿಪಾಗಿಟ್ಟಿರುತ್ತಾರೆ ಎಂದು ಹೇಳಿದರು.
‘ಸದೃಢ ಆರೈಕೆದಾರರು–ಸದೃಢ ಸಮಾಜ’ ಎಂಬ ಘೋಷವಾಕ್ಯದೊಂದಿಗೆ ಆರೈಕೆದಾರರ ದಿನವನ್ನು ಆಚರಿಸಲಾಗುತ್ತಿದೆ. ನಿಧಾನ ಕಲಿಕೆಯ ಮಕ್ಕಳನ್ನು ಆರೈಕೆ ಮಾಡುವ ಪೋಷಕರಿಗೆ ತಿಂಗಳ ಭತ್ಯೆ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದರು.
ಬೆಂಗಳೂರಿನಲ್ಲಿ ಈ ಮಕ್ಕಳ ಸಬಲೀಕರಣಕ್ಕಾಗಿ ‘ಪರ್ಪಲ್ ಫೆಸ್ಟ್’ ಕಾರ್ಯಕಮವನ್ನು ಡಿಸೆಂಬರ್ 5, 6, 7ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ‘2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ವಿಶೇಷ ಬೆಂಬಲ ಅಗತ್ಯ ಇರುವವರು 13 ಲಕ್ಷ ಜನರಿದ್ದಾರೆ. ತೀವ್ರ ಪ್ರಮಾಣದ ಅಂಗವಿಕಲತೆ ಹೊಂದಿರುವವರು 3 ಲಕ್ಷ ಇದ್ದಾರೆ’ ಎಂದು ವಿವರ ನೀಡಿದರು.
ನಿಮ್ಹಾನ್ಸ್ ಹಿರಿಯ ನಿವೃತ್ತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ಮನೋವೈದ್ಯ ಡಾ. ಜಗದೀಶ ತೀರ್ಥಹಳ್ಳಿ, ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ.ಎಂ.ಕೆ. ಶ್ರೀಧರ್, ಮಾನಸಿಕ ಆರೋಗ್ಯ ಉಪ ನಿರ್ದೇಶಕಿ ಡಾ. ರಜನಿ, ಇಲಾಖೆಯ ಉಪನಿರ್ದೇಶಕಿ ಅಶ್ವಥಮ್ಮ, ಬಾಲಭವನ ಸೊಸೈಟಿ ನಿರ್ದೇಶಕ ಬಿ.ಆರ್. ನಾಯ್ಡು ಉಪಸ್ಥಿತರಿದ್ದರು.