ಬೆಂಗಳೂರು: ಓರೆಕ್ಸ್ ಕಂಪನಿಗೆ ಸೇರಿದ್ದ ಕಾರುಗಳನ್ನು ಬಾಡಿಗೆಗೆ ಪಡೆದು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಉತ್ತರಹಳ್ಳಿಯ ಗಿರೀಶ್ ಗೌಡ (32) ಹಾಗೂ ಕೋಣನಕುಂಟೆಯ ಮೋಹನ್ (24) ಬಂಧಿತರು. ಅವರಿಂದ ₹ 5.25 ಕೋಟಿ ಮೌಲ್ಯದ 27 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಓರೆಕ್ಸ್ ಕಂಪನಿಯು ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಬಾಡಿಗೆ ರೂಪದಲ್ಲಿ ಕಾರುಗಳನ್ನು ನೀಡುತ್ತದೆ. ಕಂಪನಿ ಕಚೇರಿಗೆ ಹೋಗಿದ್ದ ಆರೋಪಿಗಳು, ಕರಾರು ಪತ್ರ ಮಾಡಿಕೊಂಡು ಕಾರುಗಳನ್ನು ಬಾಡಿಗೆಗೆ ಪಡೆದಿದ್ದರು. ನಿಗದಿತ ದಿನದೊಳಗೆ ಆರೋಪಿಗಳು ಕಾರು ವಾಪಸು ಕೊಟ್ಟಿರಲಿಲ್ಲ. ಆ ಬಗ್ಗೆ ಕಂಪನಿಯ ವ್ಯವಸ್ಥಾಪಕ ಮೋಹನ್ ಎಂಬುವರು ಬೈಯ್ಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು.’
ಕಡಿಮೆ ಬೆಲೆಗೆ ಮಾರಾಟ: ‘ಬಾಡಿಗೆ ಪಡೆದಿದ್ದ ಕಾರುಗಳನ್ನು ಸ್ವತಃ ಕಾರುಗಳೆಂದು ಹೇಳಿದ್ದ ಆರೋಪಿಗಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾರಿನ ಹಳದಿ ನೋಂದಣಿ ಫಲಕಗಳನ್ನು, ಬಿಳಿ ನೋಂದಣಿ ಫಲಕವಾಗಿ ಪರಿವರ್ತಿಸಿದ್ದರು. ಹೊರ ರಾಜ್ಯಗಳ ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು’ ಎಂದೂ ಸಿಸಿಬಿ ಪೊಲೀಸರು ಹೇಳಿದರು.
‘ಕಾರು ಮಾರಾಟದಿಂದ ಬಂದ ಹಣವನ್ನು ಹಂಚಿಕೊಂಡಿದ್ದ ಆರೋಪಿಗಳು, ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ತಿಳಿಸಿದರು.
ಕಂಪನಿ ಸಿಬ್ಬಂದಿಯೂ ಭಾಗಿ: ‘ಕೃತ್ಯದಲ್ಲಿ ಕಂಪನಿಯ ಕೆಲ ಸಿಬ್ಬಂದಿಯೂ ಭಾಗಿಯಾಗಿರುವ ಅನುಮಾನವಿದೆ. ತನಿಖೆ ಮುಂದುವರಿದಿದೆ’ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.