ADVERTISEMENT

ವಾಯುಮಾಲಿನ್ಯ ಜಾಗೃತಿಗಾಗಿ ವ್ಯಂಗ್ಯಚಿತ್ರ ಪ್ರದರ್ಶನ

150ಕ್ಕೂ ಅಧಿಕ ಕಲಾಕೃತಿಗಳು * ಡಿ.1ರವರೆಗೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:55 IST
Last Updated 28 ನವೆಂಬರ್ 2023, 15:55 IST
ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ ‘ವ್ಯಂಗ್ಯಚಿತ್ರ’ ಪ್ರದರ್ಶನವನ್ನು ಕಲಾಪ್ರೇಮಿಗಳು ವೀಕ್ಷಿಸಿದರು. – ಪ್ರಜಾವಾಣಿ ಚಿತ್ರ
ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ ‘ವ್ಯಂಗ್ಯಚಿತ್ರ’ ಪ್ರದರ್ಶನವನ್ನು ಕಲಾಪ್ರೇಮಿಗಳು ವೀಕ್ಷಿಸಿದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾಯುಮಾಲಿನ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿರುವ ವ್ಯಂಗ್ಯಚಿತ್ರ ಪ್ರದರ್ಶನವನ್ನು ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌. ವಿ. ಪ್ರಸಾದ್ ಮಂಗಳವಾರ ಉದ್ಘಾಟಿಸಿದರು. ಡಿಸೆಂಬರ್ 1ರವರೆಗೆ ಚಿತ್ರ ಪದರ್ಶನ ಮುಂದುವರಿಯಲಿದೆ.

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘ನಗರದಲ್ಲಿ ವಾಹನ ದಟ್ಟಣೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ವಾಹನಗಳು ಸಾಗುವ ವೇಗ ಕಡಿಮೆಯಾಗಿ ಸಮಯ ವ್ಯರ್ಥವಾಗುತ್ತಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ‘ಶಕ್ತಿ’ ಯೋಜನೆಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಉತ್ತೇಜಿಸಿದೆ’ ಎಂದು ತಿಳಿಸಿದರು.

‘ಸಾರಿಗೆ ಇಲಾಖೆಯು ವಾಯುಮಾಲಿನ್ಯ ಮಾಸಾಚರಣೆಯ ಅಂಗವಾಗಿ ವಿವಿಧ ಕಲಾವಿದರಿಂದ ವಾಯುಮಾಲಿನ್ಯ ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಸಂದೇಶಗಳನ್ನು ಹೊತ್ತ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಅತ್ಯುತ್ತಮ ಚಿತ್ರಕ್ಕೆ ಬಹುಮಾನ ನೀಡಲಾಗುವುದು. ಸಾರ್ವಜನಿಕರು ವ್ಯಂಗ್ಯಚಿತ್ರಗಳನ್ನು ವೀಕ್ಷಿಸಿ, ವಾಯುಮಾಲಿನ್ಯ ತಡೆಗಟ್ಟುವ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ನಗರದ ಜಂಟಿ ಸಾರಿಗೆ ಆಯುಕ್ತೆ ಎಂ. ಶೋಭಾ ಮಾತನಾಡಿ, ‘ಈ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ 46 ಜನ ಕಲಾವಿದರು ರಚಿಸಿರುವ 150ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಜನರಿಗೆ ವಾಯುಮಾಲಿನ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದು ಪ್ರದರ್ಶನದ ಉದ್ದೇಶ’ ಎಂದು ಮಾಹಿತಿ ನೀಡಿದರು.

ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತ ಎ.ಎಂ. ಯೋಗೀಶ್, ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ, ನಟ ದೀಕ್ಷಿತ್‌ ಶೆಟ್ಟಿ, ನಟಿಯರಾದ ಬೃಂದಾ ಆಚಾರ್ಯ, ಅನು ಹಾಗೂ ಇಲಾಖೆಯ ಹೆಚ್ಚುವರಿ ಆಯುಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.