ADVERTISEMENT

ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ: ಸಚಿವ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 16:08 IST
Last Updated 6 ಜನವರಿ 2025, 16:08 IST
   

ಬೆಂಗಳೂರು: ಇಂಧನ ಇಲಾಖೆಯಲ್ಲಿರುವಂತೆ, ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿಗೂ ₹ 5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸ ಸೌಲಭ್ಯವನ್ನು ಕಲ್ಪಿಸಲು ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್‌ಗಳ ಸಂಘದ ವಜ್ರಮಹೋತ್ಸವ ಸಂವಹನ ಉಪನ್ಯಾಸ ಹಾಗೂ ಸಂಘದ 2025ನೇ ಸಾಲಿನ ತಾಂತ್ರಿಕ ದಿನಚರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂಧನ ಇಲಾಖೆ ಸಿಬ್ಬಂದಿ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಕಂಪನಿ (ಸೆಸ್ಕ್) ಸಿಬ್ಬಂದಿಗೆ ಈ ಸೌಲಭ್ಯವಿದೆ. ಬೇರೆ ಎಸ್ಕಾಂಗಳಲ್ಲೂ ಶೀಘ್ರವೇ ಈ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರಿಗೆ ಸೂಚನೆ ನೀಡಿದರು.

ADVERTISEMENT

‘ಇಲಾಖೆಯಲ್ಲಿ ಹಿರಿತನದ ಆಧಾರದ ಮೇಲೆ ಬಡ್ತಿ, ಹುದ್ದೆಗಳ ಭರ್ತಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಇಲಾಖೆ ಪ್ರಗತಿ ಜತೆಗೆ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಶ್ರಮಿಸುತ್ತಿರುವ ಇಂಧನ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ‘ ಎಂದು ಹೇಳಿದರು.

ಇಂಧನ ಶೇಖರಣೆಗೆ ಆದ್ಯತೆ:

 ‘ವಿದ್ಯುತ್ ಉತ್ಪಾದನೆ ಜತೆಗೆ ಅದನ್ನು ಶೇಖರಣೆ ಮಾಡಿ ಅಗತ್ಯ ಸಂದರ್ಭದಲ್ಲಿ ಜನರಿಗೆ ಪೂರೈಸಲು ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಶರಾವತಿಯಲ್ಲಿ 2,000 ಮೆಗಾವಾಟ್ ಮತ್ತು ವಾರಾಹಿಯಲ್ಲಿ 1,500 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿದಂತೆ ಶೇಖರಣಾ ವ್ಯವಸ್ಥೆಯ ಅಗತ್ಯವಿದ್ದು, ಇದಕ್ಕೆ ಸರ್ಕಾರ ಆದ್ಯತೆ ನೀಡಲಿದೆ’ ಎಂದು ತಿಳಿಸಿದರು.

ಸೆಸ್ಕ್ ಅಧ್ಯಕ್ಷ ಎ.ರಮೇಶ್ ಬಂಡಿಸಿದ್ದೇಗೌಡ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ್‌ ಎಸ್. ಖಾದ್ರಿ, ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಸಿ. ಕೆಇಬಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.