ADVERTISEMENT

ಜಾತಿಗಣತಿ ವರದಿ: ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 15:53 IST
Last Updated 1 ಮಾರ್ಚ್ 2024, 15:53 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಮೀಕ್ಷೆಯ ವರದಿ ಸ್ವೀಕರಿಸಿರುವ ಕುರಿತ ಮಾಹಿತಿ ಒದಗಿಸಿ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವಂತೆ (ಜಾತಿ ಗಣತಿ) ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿ 2014ರ ಜ.23ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದು ಕೋರಿ ಬೀದರ್‌ನ ಶಿವರಾಜ್ ಕಣಶೆಟ್ಟಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿದೆ.

ADVERTISEMENT

2015ರ ಮೇ 5ರಂದು ಜಾತಿ ಗಣತಿ ಮುಗಿದಿದೆ ಎಂದು ಮತ್ತೊಬ್ಬ ಅರ್ಜಿದಾರ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಈ ವರದಿಯು ಒಂಬತ್ತು ವರ್ಷಗಳಿಂದ ಹಾಗೇ ಇತ್ತು. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಗುರುವಾರ ಸಂಜೆ ವರದಿ ಸಲ್ಲಿಸಿದ್ದಾರೆ. ಜಾತಿ ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂಬ ವಿಚಾರ ಸಹ ಅರ್ಜಿಯಲ್ಲಿ ಒಳಗೊಂಡಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಿ.ಆರ್. ಗುರುಮಠ  ವಿವರಿಸಿದರು.

‘ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಲಾಗಿದೆ ಎಂಬ ವಿಚಾರ ನಮಗೆ ತಿಳಿದಿಲ್ಲ. ಇದೊಂದು ಸೂಕ್ಷ್ಮ ವಿಚಾರ. ನಮಗೆ ಸಮಯ ನೀಡಿದರೆ, ಅಡ್ವೊಕೇಟ್ ಜನರಲ್ ಅವರನ್ನು ಕರೆತರಲಾಗುವುದು. ಎಲ್ಲ ವಿಚಾರವನ್ನು ನ್ಯಾಯಪೀಠಕ್ಕೆ ತಿಳಿಸಲಾಗುವುದು’ ಎಂದು ರಾಜ್ಯ ಸರ್ಕಾರ ಪರ ವಕೀಲರು ಹೇಳಿದರು.

‘ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರುವ ಬಗ್ಗೆ, ಮುಖ್ಯಮಂತ್ರಿ ಸ್ವೀಕರಿಸಿರುವ ಬಗ್ಗೆ ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ’ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ‘ವರದಿ ಸ್ವೀಕರಿಸಿಲ್ಲ ಎಂದರೆ ಅದನ್ನು ಆಧರಿಸಿ ಮುಂದುವರಿಯದಂತೆ ಆದೇಶ ಮಾಡುವ ವಿಚಾರ ಎಲ್ಲಿ ಸೃಷ್ಟಿಯಾಗುತ್ತದೆ? ಜಾತಿ ಗಣತಿಯನ್ನು (ಲೋಕಸಭಾ) ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬುದು ಅರ್ಜಿದಾರರ ಆತಂಕ ಇರಬಹುದು. ಮುಂದಿನ ಕ್ರಮ ಎಂದರೆ ಜಾತಿ ಗಣತಿ ವರದಿ ಸದನದಲ್ಲಿ ಮಂಡನೆಯಾಗುವುದೇ? ಇದು ಸಂಪುಟಕ್ಕೆ ಹೋಗುತ್ತದೆಯೇ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು.

‘ಸರ್ಕಾರದ ಉದ್ದೇಶ ಏನು ಎಂದು ತಿಳಿದಿಲ್ಲ. ಸದನದ ಮುಂದೆ ಇಡುವುದಕ್ಕೂ ಮುನ್ನ ಸಂಪುಟದಲ್ಲಿ ನಿರ್ಧಾರವಾಗಬೇಕಿದೆ’ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿರುವ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.