ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಜಾತಿ ನಿಂದನೆ ಆರೋಪ: ವಕೀಲ ಕೆ.ಎನ್‌.ಜಗದೀಶ್‌ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 16:16 IST
Last Updated 22 ಆಗಸ್ಟ್ 2025, 16:16 IST
ಜಗದೀಶ್‌ 
ಜಗದೀಶ್‌    

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಜಾತಿ ನಿಂದನೆ ಮಾಡಿದ್ದ ಹಾಗೂ ವೈಷಮ್ಯ ಮೂಡಿಸಿದ್ದ ಆರೋಪದಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಕೆ.ಎನ್‌.ಜಗದೀಶ್ ಕುಮಾರ್‌ ಅವರನ್ನು ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಜಗದೀಶ್‌ ಅವರು ಜಾತಿ ನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಿ ಕೆಂಚನಹಳ್ಳಿ ಮಂಜುನಾಥ್‌ ಅವರು ದೂರು ನೀಡಿದ್ದರು. ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳಾದ 196(1) ಹಾಗೂ 299ರ ಅಡಿ ಪ್ರಕರಣ ದಾಖಲಾಗಿತ್ತು.

‘ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಸೌಹಾರ್ದ ಹಾಳು ಮಾಡುವ, ಜಾತಿ ಜಾತಿಗಳ ನಡುವೆ ದ್ವೇಷ ಬಿತ್ತುವಂತೆ ಜಗದೀಶ್ ಅವರು ಮಾತನಾಡಿದ್ದಾರೆ. ಸಮಾಜದಲ್ಲಿ ಶಾಂತಿಭಂಗವನ್ನು ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮಂಜುನಾಥ್‌ ಉಲ್ಲೇಖಿಸಿದ್ದರು.

ADVERTISEMENT

‘ಪ್ರಕರಣದ ಸಂಬಂಧ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲು ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಗುರುವಾರ ಜಗದೀಶ್ ಅವರ ಮನೆಗೆ ತೆರಳಿದ್ದರು. ಅವರು ಮನೆಯ ಬಾಗಿಲು ತೆರೆದಿರಲಿಲ್ಲ. ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬರಲಾಗಿತ್ತು. ಶುಕ್ರವಾರ ಸಂಜೆ ಜಗದೀಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

ಬಂಧನಕ್ಕೂ ಮುನ್ನ ಜಗದೀಶ್ ಅವರು, ‘ನಮಸ್ಕಾರ ಕರ್ನಾಟಕ. ಕೊಡಿಗೇಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಾಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧ ಅಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.