ಬೆಂಗಳೂರು: ‘ಭೋವಿ ಜನಾಂಗವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತುಂಬಾ ಹಿಂದುಳಿದಿದೆ. ಸಂಖ್ಯೆಯ ದೃಷ್ಟಿಯಿಂದ ಸಮುದಾಯದವರು ಕೇಂದ್ರ ಸರ್ಕಾರ ನಡೆಸಲಿರುವ ಯಲ್ಲಿ ಭೋವಿ ಎಂದೇ ನಮೂದಿಸಬೇಕು. ವಡ್ಡ ಎಂದು ನಮೂದಿಸಬಾರದು’ ಎದು ಭೋವಿ ಜನಾಂಗ ಒಕ್ಕೂಟ ರಾಜ್ಯ ಸಮಿತಿ ಸಮುದಾಯದವರಿಗೆ ಮನವಿ ಮಾಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ‘ಭೋವಿ ಜನಾಂಗಕ್ಕೆ ಸೇರಿದ ಪ್ರತಿಯೊಬ್ಬರೂ ಜಾತಿ ಜನಗಣತಿಯಲ್ಲಿ ಭಾಗವಹಿಸಬೇಕು. ಕುಟುಂಬದ ಎಲ್ಲ ಸದಸ್ಯರ ವಿವರವನ್ನು ನೀಡಬೇಕು. ಜಾತಿ ಜನಗಣತಿ ನಡೆಯುವಾಗ ಊರುಗಳನ್ನು ತೊರೆಯಬಾರದು’ ಎಂದರು.
‘ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಭೋವಿ ಸೇರಿ ವಿವಿಧ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಹಂಚಿಕೆ ಮಾಡಲಾಗುತ್ತದೆ. ಈ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಆಯೋಗದ ಶಿಫಾರಸಿನಂತೆ ಸರ್ಕಾರವು ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲಿದೆ. ವಿವಿಧ ಸೌಲಭ್ಯಗಳನ್ನು ಪಡೆಯಲು ಈ ಸಮೀಕ್ಷೆ ಸಹಕಾರಿಯಾಗಿದ್ದು, ಜಾತಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.