ADVERTISEMENT

‘ಜಾತಿ ವ್ಯವಸ್ಥೆ ಒಂದು ಘೋರ ವಿಷ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 20:19 IST
Last Updated 31 ಜನವರಿ 2023, 20:19 IST
ಶೇಷಾದ್ರಿಪುರ ಕಾಲೇಜಿನಲ್ಲಿ ಸೋಮವಾರ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರನ್ನು ಸನ್ಮಾನಿಸಲಾಯಿತು.
ಶೇಷಾದ್ರಿಪುರ ಕಾಲೇಜಿನಲ್ಲಿ ಸೋಮವಾರ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರನ್ನು ಸನ್ಮಾನಿಸಲಾಯಿತು.   

ಬೆಂಗಳೂರು: ‘ಜಾತಿ ವ್ಯವಸ್ಥೆ ಒಂದು ಘೋರ ವಿಷ ಎಂಬುದನ್ನು ಮಕ್ಕಳಿಗೆ ಬೋಧಿಸುವ ಕೆಲಸವಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ಶೇಷಾದ್ರಿಪುರ ಕಾಲೇಜಿನಲ್ಲಿ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಗಾಂಧೀಜಿ, ಅಂಬೇಡ್ಕರ್, ಕುವೆಂಪು ಅವರು ಕಂಡಿದ್ದ ಕನಸುಗಳಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ಗಾಂಧೀಜಿ ಅವರನ್ನು ಪ್ರತಿದಿನ ಕೊಲ್ಲುತ್ತಿದ್ದೇವೆ. ಸಂವಿಧಾನ ನಮಗೆ ಅಪ್ರಸ್ತುತವಾಗುತ್ತಿದ್ದು, ಎಲ್ಲೆಡೆ ಕ್ರೌರ್ಯ ತಾಂಡವವಾಡುತ್ತಿದೆ. ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಣೆ ಈಗಲು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಹಿಂದೆಂದಿಗಿಂತಲೂ ಇಂದು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಪ್ರಸ್ತತರಾಗುತ್ತಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ ಅವರೊಡನೆ ನಾವು ಆತ್ಮೀಯ ಸಂಬಂಧ ಬೆಳೆಸಿಕೊಂಡಿರುತ್ತೇವೆ. ಹೀಗಾಗಿ ಅವರನ್ನು ಏಕವಚನದಲ್ಲೇ ಸಂಬೋಧಿಸುತ್ತೇವೆ. ಮೂಡ್ನಕೂಡ ಚಿನ್ನಸ್ವಾಮಿ ಅವರ ಒಂದೊಂದು ಕವನವೂ ಒಂದೊಂದು ಸಂದೇಶ ನೀಡುತ್ತದೆ’ ಎಂದರು.

ADVERTISEMENT

ಕವಿ ಸುಬ್ಬು ಹೊಲೆಯಾರ್ ಮಾತನಾಡಿ, ‘ಒಬ್ಬ ದಲಿತ ಹೆಣ್ಣುಮಗಳು ಸಾರ್ವಜನಿಕ ಕೊಳದಲ್ಲಿ ನೀರು ಕುಡಿದುದಕ್ಕೆ, ಚಿಕ್ಕ ದಲಿತ ಮಗು ದೇವಸ್ಥಾನದೊಳಕ್ಕೆ ಪ್ರವೇಶ ಮಾಡಿದ್ದಕ್ಕೆ ಶಿಕ್ಷಿಸಿದ ಉದಾಹರಣೆಗಳಿವೆ. ಇಂತಹ ಘಟನೆಗಳನ್ನು ಸಾಹಿತ್ಯದ ಮೂಲಕ ಇವರಿಬ್ಬರೂ ಖಂಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಸ್ಪೃಶ್ಯಲೋಕ, ಸ್ತ್ರೀಲೋಕ ಎರಡೂ ಸಮುದಾಯಗಳನ್ನು ಅಭಿನಂದಿಸಿದ್ದೇವೆ’ ಎಂದು ಹೇಳಿದರು.

ವೂಡೇ.ಪಿ. ಕೃಷ್ಣ, ಪತ್ರಕರ್ತ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್, ಸಾಹಿತಿ ದ್ವಾರನಕುಂಟೆ ಪಾತಣ್ಣ, ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ., ಸತ್ಯಮಂಗಲ ಮಹಾದೇವ್, ಆರ್.ಜಿ. ಹಳ್ಳಿನಾಗರಾಜ್, ಸಿದ್ದಲಿಂಗಯ್ಯ ಬನ್ನಂಗಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.