ADVERTISEMENT

‘ಕಾವೇರಿ ಎಂಪೋರಿಯಂನಲ್ಲಿ ಕಲ್ಲಿನ ಕೆತ್ತನೆಗಳ ಮಾರಾಟ’

ಕರ್ನಾಟಕ ರಾಜ್ಯ ಕರಕುಶಲ ನಿಗಮ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 21:32 IST
Last Updated 1 ಜನವರಿ 2021, 21:32 IST
ಬೇಳೂರು ರಾಘವೇಂದ್ರ ಶೆಟ್ಟಿ ಅವರು ಕಲಾಕೃತಿಕಗಳನ್ನು ಪರಿಶೀಲಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಾನಾಯ್ಕ್ ಇದ್ದರು.
ಬೇಳೂರು ರಾಘವೇಂದ್ರ ಶೆಟ್ಟಿ ಅವರು ಕಲಾಕೃತಿಕಗಳನ್ನು ಪರಿಶೀಲಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಾನಾಯ್ಕ್ ಇದ್ದರು.   

ಬೆಂಗಳೂರು: ‘ಕಾವೇರಿ ಎಂಪೋರಿಯಂ ಮಳಿಗೆಗಳಲ್ಲಿ ಇನ್ನುಮುಂದೆ ಮರದ ಕೆತ್ತನೆಗಳ ಜತೆಗೆ ಕಲ್ಲಿನ ಕೆತ್ತನೆಗಳಿಗೂ ಮಾರಾಟ ಮಾಡಲು ಅವಕಾಶ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಪ್ರಮುಖ ಪಾರಂಪರಿಕ ಕ್ಷೇತ್ರಗಳ ಕೆತ್ತನೆಗಳ ಮಾದರಿಗಳನ್ನು ತಯಾರಿಸಿ, ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಇಲ್ಲಿನ ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಹಂಪಿ, ಐಹೋಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಬಾದಾಮಿ ಸೇರಿದಂತೆ ವಿವಿಧ ಪಾರಂಪರಿಕ ಸ್ಥಳಗಳಲ್ಲಿನ ವಾಸ್ತುಶಿಲ್ಪದ ಕಲಾಕೃತಿಗಳನ್ನು ಕಾವೇರಿ ಎಂಪೋರಿಯಂನಲ್ಲಿ ಇಡಲಾಗುತ್ತದೆ. ಈ ಮೂಲಕ ವಾಸ್ತುಶಿಲ್ಪ ಕಲಾಕೃತಿಗಳ ಮಾರಾಟಕ್ಕೆ ಬೃಹತ್ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ’ ಎಂದು ವಿವರಿಸಿದರು.

ವಿಗ್ರಹಗಳ ನಿರ್ಮಾಣ: ‘ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶಿಲ್ಪಿಗಳಿಗೆ ನೆರವಾಗುತ್ತಿದ್ದೇವೆ. ದೊಡ್ಡ ಕಲ್ಲಿನಲ್ಲಿ ದೇವಸ್ಥಾನಗಳನ್ನು ಕಟ್ಟಲು ಹಾಗೂ ಗೋಪುರಗಳನ್ನು ನಿರ್ಮಿಸಲು ಕೂಡ ಸಹಕಾರ ನೀಡಲಾಗುತ್ತಿದೆ. ಕೃಷ್ಣ ಶಿಲೆಯಿಂದ ಸಿದ್ಧಗೊಳಿಸಿದ ಈಶ್ವರ ಲಿಂಗ,ಕೃಷ್ಣ, ಭದ್ರಕಾಳಿ, ಶ್ರೀದೇವಿ, ಮಹಾದೇವಿ, ಸರಸ್ವತಿ ಸೇರಿದಂತೆ ವಿವಿಧ ದೇವರ ವಿಗ್ರಹಗಳ ಜತೆಗೆ ಕರಾವಳಿ ಭಾಗದಲ್ಲಿ ತಯಾರಾಗುವ ದೈವಗಳ ರೂಪದ ಕಲ್ಲಿನ ಕೆತ್ತನೆಗಳನ್ನೂ ಶಿಲ್ಪಿಗಳು ಕಾವೇರಿ ಎಂಪೋರಿಯಂಗೆ ಒದಗಿಸಲಿದ್ದಾರೆ’ ಎಂದರು.

ADVERTISEMENT

‘ಇಷ್ಟು ವರ್ಷ ಕೇವಲ ಮರದ ಕೆತ್ತನೆಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಇದರಿಂದ ಕಲ್ಲಿನ ಕೆತ್ತನೆಗಾರರಿಗೆ ಅವಕಾಶವಿರಲಿಲ್ಲ. ಈಗ ಶಿಲ್ಪಿಗಳಿಗೆ ಕೂಡ ಉತ್ತಮ ವೇದಿಕೆ ಒದಗಿಸಿದ್ದೇವೆ. ಕಲ್ಲಿನ ಕಚ್ಚಾವಸ್ತುಗಳು ಹಾಗೂ ಕೆತ್ತನೆ ಕೆಲಸಕ್ಕೆ ಬೇಕಾದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೆತ್ತನೆಗಾರರಿಗೆ ತರಬೇತಿಗೂ ವ್ಯವಸ್ಥೆ ಮಾಡಲಾಗುವುದು. ಕಲ್ಲಿನ ಕೆತ್ತನೆಗಳನ್ನು ಪ್ರವಾಸಿ ತಾಣಗಳಲ್ಲಿ ಮಾರಾಟ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜತೆಗೆ ಚರ್ಚಿಸಿ, ಕಾರ್ಯಯೋಜನೆಯನ್ನು ರೂಪಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.