ADVERTISEMENT

ಮೂರ್ನಾಲ್ಕು ತಿಂಗಳಲ್ಲಿ ಕಾವೇರಿ ನೀರು: ಡಿ.ಕೆ. ಶಿವಕುಮಾರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:33 IST
Last Updated 11 ಜನವರಿ 2024, 16:33 IST
ಮಹಿಳೆಯೊಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು
ಮಹಿಳೆಯೊಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು   

ಬೊಮ್ಮನಹಳ್ಳಿ: ‘ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳಿಗೆ ಮೂರ್ನಾಲ್ಕು ತಿಂಗಳಲ್ಲಿ ಕಾವೇರಿ ನೀರು ಪೂರೈಕೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.

ಜರಗನಹಳ್ಳಿ ಸರ್ಕಾರಿ ಆಟದ ಮೈದಾನದಲ್ಲಿ ಗುರುವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕಪುರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ರಸ್ತೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ADVERTISEMENT

‘ಬೆಂಗ್ಳೂರಿಗೆ ಬಂದು ಬಾಳಾ ವರ್ಷ ಆದ್ರೂ ರೇಷನ್ ಕಾರ್ಡ್ ಇಲ್ಲ, ರೇಷನ್ ಕಾರ್ಡ್ ಕೊಡ್ಸಿ..’ ‘ಟ್ಯಾಂಕರ್ ನೀರಿಗೆ ದುಡ್ಡುಕೊಟ್ಟು ಸಾಕಾಗಿದೆ, ನೀರಿನ ವ್ಯವಸ್ಥೆ ಮಾಡಿಕೊಡಿ...’, ‘ಭಾಗ್ಯಲಕ್ಷ್ಮಿ ಯೋಜನೆಯ ಹಣ ಬರ್ತಿಲ್ಲ, ಬರೋಹಂಗೆ ಮಾಡಿ’ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

‘ವಾಸಕ್ಕೆ ಮನೆಯಿಲ್ಲ, ಉದ್ಯೋಗವಿಲ್ಲ, ಸ್ಮಶಾನಕ್ಕೆ ಜಾಗವಿಲ್ಲ, ಮೂಲ ಸೌಲಭ್ಯ ಕೊರತೆ, ಬಹುಮಹಡಿ ಕಟ್ಟಡಕ್ಕೆ ₹1 ಲಕ್ಷ ನೀಡಿ 6 ವರ್ಷವಾದರೂ ಫ್ಲ್ಯಾಟ್‌ ಸಿಕ್ಕಿಲ್ಲ, ವಿಧವಾ ವೇತನ, ವೃದ್ಧಾಪ್ಯ ವೇತನ, ಪಿಂಚಣಿ ಕೊಡಲು ಹಣ ಕೇಳಿದ್ದಾರೆ’ ಎಂದು ಹಲವು ನಾಗರಿಕರು ದೂರಿದರು. ಅಧಿಕಾರಿಗಳ ನಿರ್ಲಕ್ಷ್ಯ, ಕಚೇರಿಗೆ ಅಲೆದಾಡಿಸುವುದು, ಪೊಲೀಸರ ಕಿರುಕುಳ ಬಗ್ಗೆಯೂ ಗಮನ ಸೆಳೆದರು. ಒಎಫ್‌ಸಿ ಕೇಬಲ್ ಮಾಫಿಯಾ, ಸಾರಕ್ಕಿ ಕೆರೆ ಒತ್ತುವರಿ, ನಕಲಿ ಖಾತಾ ಹಾವಳಿಯಂತಹ ಗಂಭೀರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

‘ಸುಮಾರು 5 ಸಾವಿರ ಮಂದಿ ಅಹವಾಲುಗಳನ್ನು ಸಲ್ಲಿಸಿದ್ದೀರಿ. ಅಧಿಕಾರಿಗಳ ಬಳಿ ತಿರುಗಿಯೂ ಪರಿಹಾರ ಸಿಗದಿದ್ದಾಗ ನೀವು ನನ್ನ ಬಳಿ ಬಂದಿದ್ದೀರಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ ‘ಬನ್ನೇರುಘಟ್ಟ ರಸ್ತೆಯ ಅಂಜನಾಪುರ ರಸ್ತೆ ಸಮಸ್ಯೆಯನ್ನು ಬಗೆಹರಿಸಿ ಕೊಡಿ. ಪಶುವೈದ್ಯಕೀಯ ಆಸ್ಪತ್ರೆಗಳನ್ನು ಸ್ಥಳಾಂತರಿಸಬೇಡಿ. ಕೋಣನಕುಂಟೆ ಸಿಗ್ನಲ್ ಬಳಿ ಮೆಟ್ರೊದವರು ಅಳವಡಿಸಿರುವ ತಂತಿ ಬೇಲಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ’ ಎಂದು ಮನವಿ ಮಾಡಿದರು. ’ನಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಕೂಡ ಹೆಚ್ಚಾಗಿದೆ. ಸಮಸ್ಯೆ ಬಗೆ ಹರಿಸುವಂತೆಯೂ ಅವರು ಕೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ಕನಕಪುರ ರಸ್ತೆ ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳು ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಅಧಿಕವಾಗಿದೆ. ಬೆಳಿಗ್ಗೆ ಹಾಗೂ ಸಂಜೆಯ ‘ಪೀಕ್‌ ಅವರ್‌’ನಲ್ಲಿ ಎರಡು ಸಾವಿರ ಕಾರುಗಳು ಒಂದು ಗಂಟೆ ಅವಧಿಯಲ್ಲಿ ಸಂಚರಿಸುತ್ತವೆ. ದಟ್ಟಣೆ ನಿಯಂತ್ರಿಸಬೇಕು. ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.