ADVERTISEMENT

ಕಾವೇರಿ ನೀರು ಪೂರೈಕೆ ಯಥಾಸ್ಥಿತಿ ಇಂದಿನಿಂದ

36 ಗಂಟೆಗಳಲ್ಲಿ ಟಿ.ಕೆ. ಹಳ್ಳಿಯ ಯಂತ್ರಗಾರಗಳ ದುರಸ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 21:57 IST
Last Updated 6 ಸೆಪ್ಟೆಂಬರ್ 2022, 21:57 IST
ಟಿ.ಕೆ. ಹಳ್ಳಿಯಲ್ಲಿನ ಯಂತ್ರಗಾರದಲ್ಲಿನ ನೀರನ್ನು ಮಂಗಳವಾರ ಹೊರತೆಗೆಯಲಾಯಿತು
ಟಿ.ಕೆ. ಹಳ್ಳಿಯಲ್ಲಿನ ಯಂತ್ರಗಾರದಲ್ಲಿನ ನೀರನ್ನು ಮಂಗಳವಾರ ಹೊರತೆಗೆಯಲಾಯಿತು   

ಬೆಂಗಳೂರು: ‌ನಗರದಲ್ಲಿ ಬುಧವಾರ ದಿಂದ ಎಂದಿನಂತೆ ಕಾವೇರಿ ನೀರು ಪೂರೈಕೆಯಾಗಲಿದೆ. ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿನ ಕಾವೇರಿ ನೀರು ಸರಬರಾಜು ಯೋಜನೆಯ 3 ಹಾಗೂ 4ನೇ ಹಂತದ ಎರಡನೇ ಘಟಕದಿಂದ ನೀರು ಸರಬರಾಜು ಮಾಡುವ ಯಂತ್ರಾಗಾರದಲ್ಲಿ ಸುಮಾರು 20 ಅಡಿಗಳಷ್ಟು ನೀರು ತುಂಬಿ ಯಂತ್ರಾಗಾರವು ಮುಳುಗಡೆಯಾಗಿತ್ತು.

ಯಂತ್ರಾಗಾರದಲ್ಲಿದ್ದ ನೀರನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿದ್ದು, ಎಲೆಕ್ಟ್ರಿಕಲ್‌ ಪ್ಯಾನಲ್‌
ಗಳಲ್ಲಿನ ತೇವಾಂಶವನ್ನು ತೆಗೆದು ಪಂಪ್‌ಗಳನ್ನು ಯಥಾಸ್ಥಿತಿಗೆ ತರಲಾಗಿದೆ. ಸಾರ್ವ ಜನಿಕರ ಹಿತದೃಷ್ಟಿಯಿಂದ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ ಪಂಪ್‌ಗಳನ್ನು ಬಳಸಿಕೊಂಡು ನಗರಕ್ಕೆ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಲಮಂಡಳಿಯ ಮತ್ತು ಖಾಸಗಿ ಟ್ಯಾಂಕರ್‌ಗಳು ಸೇರಿ ಸುಮಾರು 200 ಟ್ಯಾಂಕರ್‌ಗಳ ಮೂಲಕ ನೀರು ವ್ಯತ್ಯಯವಾಗಿರುವ ಪ್ರದೇಶಗಳಿಗೆ ಸರಬರಾಜು ಮಾಡಲಾಗಿದೆ ಎಂದು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿ ದ್ದಾರೆ.

ಆದ್ಯತೆಯ ಮೇರೆಗೆ ಬಡವರು, ಕೊಳೆಗೇರಿ ನಿವಾಸಿಗಳು, ಮಧ್ಯಮ ವರ್ಗ, ಕಾರ್ಮಿಕ ವರ್ಗ ಹಾಗೂ ಕೂಲಿಕಾರ್ಮಿಕರಿಗೆ ಉಚಿತವಾಗಿ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಿದೆ ಎಂದು ತಿಳಿಸಿದ್ದಾರೆ.

ADVERTISEMENT

4ನೇ ಹಂತದ ಎರಡನೇ ಘಟಕದ ಯಂತ್ರಾಗಾರದಲ್ಲಿನ ಎರಡು ಪಂಪ್‌ ಗಳನ್ನು ಪೂರ್ಣ ದುರಸ್ತಿಗೊಳಿಸಲಾಗಿದೆ. ಇದರಿಂದ ನಗರಕ್ಕೆ 220 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಉಳಿದ ಪಂಪ್‌ಗಳನ್ನು ಹಂತ ಹಂತವಾಗಿ ದುರಸ್ತಿ ಗೊಳಿಸಲಾಗುತ್ತಿದ್ದು, ಬುಧವಾರ ಬೆಳಿಗ್ಗೆ ಕಾರ್ಯಾರಂಭ ಮಾಡಲಿವೆ ಎಂದೂ ತಿಳಿಸಿದ್ದಾರೆ.

ಒಂದು ವಾರದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಯನ್ನು ಯಾವುದೇ ವಿಶ್ರಾಂತಿ ಪಡೆಯದೆ ಅಧಿಕಾರಿಗಳು, ಎಂಜಿನಿಯರ್‌ಗಳು, ಸಿಬ್ಬಂದಿ ಮತ್ತು ಕಾರ್ಮಿಕರು ಹಗಲಿರುಳು ಶ್ರಮಿಸಿದ್ದ ರಿಂದ ಕೇವಲ 36 ಗಂಟೆಗಳಅವಧಿಯಲ್ಲಿ ಕಾವೇರಿ ನಾಲ್ಕನೇಹಂತ 2ನೇ ಘಟಕ ಮತ್ತು ಕಾವೇರಿ ಮೂರನೇ ಹಂತದ ಯಂತ್ರಗಳನ್ನು ದುರಸ್ತಿಗೊಳಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.