ADVERTISEMENT

ಖೋಟಾನೋಟು ಪತ್ತೆ: ವಿದೇಶಿಯರ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ, ಅಕ್ರಮವಾಗಿ ವಾಸವಿದ್ದ ಆಫ್ರಿಕಾದ 20 ಪ್ರಜೆಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 0:12 IST
Last Updated 5 ಆಗಸ್ಟ್ 2020, 0:12 IST
ಜಪ್ತಿ ಮಾಡಲಾದ ಖೋಟಾ ನೋಟುಗಳು
ಜಪ್ತಿ ಮಾಡಲಾದ ಖೋಟಾ ನೋಟುಗಳು   

ಬೆಂಗಳೂರು: ಆಫ್ರಿಕಾ ಪ್ರಜೆಗಳು ನೆಲೆಸಿರುವ ಮನೆಗಳ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ಬೆಳಿಗ್ಗೆ ದಿಢೀರ್ ದಾಳಿ ಮಾಡಿದ್ದು, ಖೋಟಾ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

‘ಹೆಣ್ಣೂರು ಹಾಗೂ ಬಾಣಸವಾಡಿ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಬಾಡಿಗೆಗೆ ವಾಸವಿರುವ ಪ್ರಜೆಗಳು, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದಿತ್ತು. ಅದನ್ನು ಆಧರಿಸಿ ಈ ದಾಳಿ ಮಾಡಲಾಯಿತು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

’ಸಿಸಿಬಿಯ 250 ಸಿಬ್ಬಂದಿಯ ತಂಡ ಏಕಕಾಲದಲ್ಲಿ 35 ಮನೆಗಳಲ್ಲಿ ತಪಾಸಣೆ ನಡೆಸಿತು. ಭಾರತದ ರೂಪಾಯಿ, ಅಮೆರಿಕದ ಡಾಲರ್ ಸೇರಿ ಹಲವು ದೇಶಗಳ ಖೋಟಾ ನೋಟುಗಳು ಕೆಲವು ಮನೆಗಳಲ್ಲಿ ಪತ್ತೆಯಾದವು. ಈ ಸಂಬಂಧ 7 ಆಫ್ರಿಕಾ ಪ್ರಜೆಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘₹2,000 ಮುಖಬೆಲೆಯ 45 ನೋಟುಗಳು, ₹500 ಮುಖಬೆಲೆಯ 85 ನೋಟುಗಳು ಸಿಕ್ಕಿವೆ. ಆರೋಪಿಗಳು ಅವುಗಳನ್ನು ಎಲ್ಲಿ ಮುದ್ರಿಸಿದ್ದಾರೆ ಹಾಗೂ ಎಲ್ಲೆಲ್ಲೆ ಚಲಾವಣೆ ಮಾಡುತ್ತಿದ್ದರು ಎಂಬ ಮಾಹಿತಿ ಕಲೆಹಾಕಲಾಕುತ್ತಿದೆ’ ಎಂದೂ ಅವರು ವಿವರಿಸಿದರು.

ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ಡಿಸಿಪಿಗಳಾದ ಕುಲದೀಪ್ ಜೈನ್ ಹಾಗೂ ಕೆ.ಪಿ.ರವಿಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆಯಿತು.

ಅಕ್ರಮ ವಾಸವಿದ್ದ 20 ಮಂದಿಯ ಬಂಧನ: ‘ವೀಸಾ ಅವಧಿ ಮುಗಿದರೂ 20 ವಿದೇಶಿಗರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಸಿಸಿಬಿ ಪೊಲೀಸರು ಹೇಳಿದರು.

’20 ಮಂದಿಯ ವೀಸಾ, ಪಾಸ್‌ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಆರೋಪಿಗಳು ಕೆಲ ದಿನಗಳಿಂದ ರಸ್ತೆಯಲ್ಲೇ ಮದ್ಯದ ಪಾರ್ಟಿ ಮಾಡಿ ಸ್ಥಳೀಯರಿಗೆ ಕಿರಿಕಿರಿನ್ನುಂಟು ಮಾಡಿ ದ್ದರು. ಪೂರ್ವ ವಿಭಾಗದ ಪೊಲೀಸರು ಮನೆಗಳ ಮೇಲೆ ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡೆದಿದ್ದರು’ ಎಂದೂ ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.