ಬೆಂಗಳೂರು: ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಆರು ಮೆಟ್ರೊ ನಿಲ್ದಾಣಗಳಲ್ಲಿ ಸುಧಾರಿತ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಿಎಂಆರ್‌ಸಿಎಲ್ ಅಳವಡಿಸಿದೆ.
ನಿಲ್ದಾಣದ ಒಳ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳೂ ಕ್ಯಾಮೆರಾ ನಿಗಾ ವ್ಯಾಪ್ತಿಗೆ ಒಳಪಡಲಿದ್ದು, ಎಐ ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗಲಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ (ಎಎನ್‌ಪಿಆರ್) ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎಐ ಆಧಾರಿತ ವಿಡಿಯೊ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆಗಳು, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
‘ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದೇವೆ. ಎಐ ಮತ್ತು ಎಎನ್‌ಪಿಆರ್ ತಂತ್ರಜ್ಞಾನವು ನಮಗೆ ನಿಲ್ದಾಣದಲ್ಲಿನ ಚಟುವಟಿಕೆಗಳನ್ನು ನಿರಂತರ ಗಮನಿಸಲು ಮತ್ತು ತಕ್ಷಣ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.