ADVERTISEMENT

ಸಿ.ಡಿ. ಪ್ರಕರಣ: ಪುರಾವೆಗೆ ಸಮಯ ಕೇಳಿದ ಸಂತ್ರಸ್ತೆ, ತನಿಖಾಧಿಕಾರಿ ಎದುರು ಹಾಜರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 21:37 IST
Last Updated 12 ಏಪ್ರಿಲ್ 2021, 21:37 IST
   

ಬೆಂಗಳೂರು: ಸಿ.ಡಿ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳ ಎದುರು ಸೋಮವಾರ ಹಾಜರಾದರು.

‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಸಂತ್ರಸ್ತೆ ನೀಡಿರುವ ದೂರಿನಡಿ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಎಂ.ಸಿ.ಕವಿತಾ, ಪ್ರಕರಣಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಅದೇ ಕಾರಣಕ್ಕೆ ಭಾನುವಾರ ಸಂತ್ರಸ್ತೆಗೆ ನೋಟಿಸ್ ನೀಡಿದ್ದ ತನಿಖಾಧಿಕಾರಿ, ‘ಪ್ರಕರಣ ಸಂಬಂಧ ತಾವು ನೀಡಿರುವ ಹೇಳಿಕೆಗೆ ಪೂರಕವಾದ ವಿಡಿಯೊ, ಆಡಿಯೊ, ವಾಟ್ಸ್‌ಆ್ಯಪ್‌ ಚಾಟಿಂಗ್, ಭಾವಚಿತ್ರ ಹಾಗೂ ಇತರೆ ದಾಖಲಾತಿಗಳ ಸಮೇತ ಕಚೇರಿಗೆ ಹಾಜರಾಗಿ’ ಎಂದಿದ್ದರು.

ADVERTISEMENT

ಸೋಮವಾರ ಬೆಳಿಗ್ಗೆ 11.30 ಗಂಟೆ ಸುಮಾರಿಗೆ ವಕೀಲರ ಸಮೇತ ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಬಂದಿದ್ದ ಸಂತ್ರಸ್ತೆ, ಅರ್ಧ ಗಂಟೆ ತನಿಖಾಧಿಕಾರಿ ಜೊತೆ ಮಾತನಾಡಿದರು.

‘ನೀವು ಕೇಳಿರುವ ದಾಖಲೆಗಳೆಲ್ಲವೂ ನನ್ನ ಬಳಿ ಇದೆ. ಆದರೆ, ಅವುಗಳನ್ನು ನಿಮಗೆ ತಂದುಕೊಡಲು ಕಾಲಾವಕಾಶ ಬೇಕು’ ಎಂದು ಸಂತ್ರಸ್ತೆ, ಲಿಖಿತವಾಗಿಯೇ ತನಿಖಾಧಿಕಾರಿಗೆ ಬರೆದುಕೊಟ್ಟರು. ಅದಕ್ಕೆ ಒಪ್ಪಿದ ತನಿಖಾಧಿಕಾರಿ, ಪುರಾವೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಿದ್ದಾರೆ.

ಹೇಳಿಕೆಗೆ ಸಂತ್ರಸ್ತೆ ಬದ್ಧ

ಸಂತ್ರಸ್ತೆ ವಿಚಾರಣೆಗೆ ಹಾಜರಾದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಕೀಲ ಸೂರ್ಯ ಮುಕುಂದರಾಜ್‌, ‘ಪ್ರಕರಣ ಸಂಬಂಧ ನೀಡಿರುವ ಹೇಳಿಕೆಗೆ ಸಂತ್ರಸ್ತೆ ಬದ್ಧರಾಗಿದ್ದಾರೆ. ಪುರಾವೆ ಕೇಳಿ ತನಿಖಾಧಿಕಾರಿ ನೋಟಿಸ್‌ ನೀಡಿದ್ದರು. ಲಿಖಿತ ರೂಪದಲ್ಲೇ ಸಂತ್ರಸ್ತೆ ಕಾಲಾವಕಾಶ ಕೋರಿದ್ದಾರೆ’ ಎಂದರು.

‘ಸಂತ್ರಸ್ತೆ ತಮ್ಮ ಹೇಳಿಕೆ ಹಿಂಪಡೆಯುತ್ತಿದ್ದಾರೆಂದು ಕೆಲವೆಡೆ ಸುದ್ದಿ ಹರಿದಾಡಿದೆ. ಆದರೆ, ಅದು ಸುಳ್ಳು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.