ADVERTISEMENT

ಸಿ.ಇ ಟಿ.ಡಿ ನಂಜುಂಡಪ್ಪ ಲೋಕಾಯುಕ್ತದಿಂದ ವಾಪಸ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:15 IST
Last Updated 27 ಮಾರ್ಚ್ 2024, 16:15 IST
ಲೋಕಾಯುಕ್ತ
ಲೋಕಾಯುಕ್ತ   

ಬೆಂಗಳೂರು: ನಾಲ್ಕು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವುದನ್ನು ಮುಚ್ಚಿಟ್ಟು ಲೋಕಾಯುಕ್ತದ ತಾಂತ್ರಿಕ ವಿಭಾಗದ ಮುಖ್ಯಸ್ಥರ ಹುದ್ದೆಗೆ ವರ್ಗವಾಗಿ ಬಂದಿದ್ದ ಮುಖ್ಯ ಎಂಜಿನಿಯರ್‌ (ಸಿ.ಇ) ಟಿ.ಡಿ. ನಂಜುಂಡಪ್ಪ ಅವರನ್ನು ಲೋಕಾಯುಕ್ತದಿಂದ ವಾಪಸ್‌ ಕಳುಹಿಸಲಾಗಿದೆ.

ನಂಜುಂಡಪ್ಪ ಲೋಕಾಯುಕ್ತದ ತಾಂತ್ರಿಕ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಮಾರ್ಚ್‌ 18ರಂದು ಮಧ್ಯಾಹ್ನ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ಸಂಸ್ಥೆಯಲ್ಲೇ ಅವರ ವಿರುದ್ಧ ದೂರುಗಳು ವಿಚಾರಣೆಗೆ ಬಾಕಿ ಇರುವುದರಿಂದ ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ ಲೋಕಾಯುಕ್ತದ ರಿಜಿಸ್ಟ್ರಾರ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ನಂಜುಂಡಪ್ಪ ಹಿಂದೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದರು. ಆಗ, ಬಂಡೆಮಠ ಕೆಎಚ್‌ಬಿ ಬಡಾವಣೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಆ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬಿ. ರಾಮಕೃಷ್ಣೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆ ಪ್ರಕರಣ ವಿಚಾರಣೆಗೆ ಬಾಕಿ ಇರುವಾಗಲೇ ನಂಜುಂಡಪ್ಪ ಅವರನ್ನು ಲೋಕಾಯುಕ್ತದ ಮುಖ್ಯ ಎಂಜಿನಿಯರ್‌ ಹುದ್ದೆಗೆ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

‘ಬಂಡೆಮಠ ಬಡಾವಣೆ ಪ್ರಕರಣದ ಕುರಿತು ನಂಜುಂಡಪ್ಪ ಅವರಿಂದ ವಿವರಣೆ ಕೇಳಲಾಗಿತ್ತು. ಮಂಗಳವಾರ ಅವರು ವಿವರಣೆ ನೀಡಿದ್ದರು. ನಂಜುಂಡಪ್ಪ ವಿರುದ್ಧ ಇನ್ನೂ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ನಮ್ಮ ಸಂಸ್ಥೆಗೆ ಅವರನ್ನು ನಿಯೋಜಿಸುವ ಮುನ್ನ ಸಹಮತಿಯನ್ನೂ ಪಡೆದಿರಲಿಲ್ಲ. ಈ ಕಾರಣದಿಂದ ಅವರನ್ನು ಲೋಕಾಯುಕ್ತದ ಮುಖ್ಯ ಎಂಜಿನಿಯರ್‌ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌. ರವಿಶಂಕರ್‌ ಅವರಿಗೆ ಮುಖ್ಯ ಎಂಜಿನಿಯರ್‌ ಹುದ್ದೆಯ ಪ್ರಭಾರ ವಹಿಸಲಾಗಿದೆ. ಸಂಸ್ಥೆಯ ಸಹಮತಿ ಪಡೆದು ಮುಖ್ಯ ಎಂಜಿನಿಯರ್‌ ಒಬ್ಬರನ್ನು ನಿಯೋಜಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.