ADVERTISEMENT

‘ಕಾಂಕ್ರೀಟೀಕರಣದಿಂದ ಪರಿಸರಕ್ಕೆ ಹಾನಿ’

ಕೃಷಿ ವಿವಿ ಕುಲಪತಿ ಎಸ್‌. ರಾಜೇಂದ್ರ ಪ್ರಸಾದ್ ಬೇಸರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:00 IST
Last Updated 14 ಆಗಸ್ಟ್ 2019, 20:00 IST

ಬೆಂಗಳೂರು: ‘ನಗರದಲ್ಲಿ ಹೆಚ್ಚುತ್ತಿರುವಕಾಂಕ್ರಿಟೀಕರಣದಿಂದ ಹಸಿರು ನಾಶವಾಗುವ ಜತೆಗೆ ಮಾಲಿನ್ಯದ ಪ್ರಮಾಣ ಅಧಿಕವಾಗುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹು
ಮಾನ ವಿತರಿಸಿ ಮಾತನಾಡಿದರು.

‘ಆಧುನೀಕರಣದ ನೆಪದಲ್ಲಿ ಪರಿಸರಕ್ಕೆ ಮಾರಕವಾಗುವ ವಸ್ತುಗಳನ್ನು ಬಳಸುತ್ತಿದ್ದೇವೆ. ಪರಿಸರಕ್ಕೆ ಪೂರಕ
ವಾದ ವಸ್ತುಗಳನ್ನು ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ನೀರನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪರಿಣಾ
ಮವನ್ನು ಎದುರಿಸಬೇಕಾಗುತ್ತದೆ. ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ನೀರಿನ ಬಾಟಲಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಬಳಕೆ ಮಾಡಿದರೂ ನೀರು ವ್ಯರ್ಥವಾಗದಂತೆ ಗಿಡಗಳಿಗೆ ಹಾಕಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಸಾವಿರಾರು ಮಂದಿ ಹಸಿವಿನಿಂದ ನರಳುತ್ತಿದ್ದಾರೆ. ಆದರೆ, ಇದೇ ವೇಳೆ ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಇದಕ್ಕೆ ಕೂಡ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದರು.

ಗಿಡದ ಜತೆಗೆ ಸೆಲ್ಫಿ: ‘ಕೃಷಿ ವಿವಿಯಲ್ಲಿ ಪ್ರಥಮ ವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಎರಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು.ವಿದ್ಯಾಭ್ಯಾಸ ಮುಗಿಸಿ ಹೊರ ಹೋಗುವ ಸಂದರ್ಭದಲ್ಲಿ ಗಿಡದ ಜತೆಗೆ ಸೆಲ್ಫಿ ತೆಗೆದುಕೊಂಡು ಕಾಲೇಜಿಗೆ ಸಲ್ಲಿಸಬೇಕು. ಅವರು ಬೆಳೆಸಿದ ಗಿಡ ಹಾಗೂ ಶೈಕ್ಷಣಿಕ ಚಟುವಟಿಕೆಯನ್ನು ಪರಿಗಣಿಸಿ ಹಸಿರು ಪ್ರಮಾಣಪತ್ರ ನೀಡುತ್ತಿದ್ದೇವೆ’ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಎಚ್‍ಎಎಲ್, ಬಿಬಿಎಂಪಿ, ಬಿಡಿಎ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡವು. ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ವಿಜೇತರಾದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.