ADVERTISEMENT

ರಸ್ತೆ ಬದಿ ಮರಗಳ ಬುಡಕ್ಕೆ ಕಾಂಕ್ರೀಟ್‌ ಕುತ್ತು

ಕಾಂಕ್ರೀಟ್‌, ಪೇವರ್ಸ್‌ ಅಳವಡಿಸುವ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಕೊರತೆ: ಪರಿಸರ ಪ್ರೇಮಿಗಳ ಆಕ್ರೋಶ

ಖಲೀಲಅಹ್ಮದ ಶೇಖ
Published 13 ಡಿಸೆಂಬರ್ 2022, 20:52 IST
Last Updated 13 ಡಿಸೆಂಬರ್ 2022, 20:52 IST
ಬೆಂಗಳೂರಿನ ವಿಜಯನಗರದ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಮುಖ್ಯ ಬಸ್‌ ನಿಲ್ದಾಣ ನೂತನ ಪಾದಚಾರಿ ಕಾಮಗಾರಿಯಿಂದ ಅಲ್ಲಿರುವ ಮರಗಳ ಬುಡಕ್ಕೆ ಕಾಂಕ್ರೀಟ್‌ ಹಾಕಿ ಮುಚ್ಚಿರುವುದು -(ಎಡಚಿತ್ರ) ವಿಜಯನಗರದ ಪಾದಚಾರಿ ಮಾರ್ಗದಲ್ಲಿರುವ ಮರದ ಬುಡಕ್ಕೆ ಕಾಂಕ್ರೀಟ್‌ ಹಾಕಿರುವುದು.    – ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರಿನ ವಿಜಯನಗರದ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಮುಖ್ಯ ಬಸ್‌ ನಿಲ್ದಾಣ ನೂತನ ಪಾದಚಾರಿ ಕಾಮಗಾರಿಯಿಂದ ಅಲ್ಲಿರುವ ಮರಗಳ ಬುಡಕ್ಕೆ ಕಾಂಕ್ರೀಟ್‌ ಹಾಕಿ ಮುಚ್ಚಿರುವುದು -(ಎಡಚಿತ್ರ) ವಿಜಯನಗರದ ಪಾದಚಾರಿ ಮಾರ್ಗದಲ್ಲಿರುವ ಮರದ ಬುಡಕ್ಕೆ ಕಾಂಕ್ರೀಟ್‌ ಹಾಕಿರುವುದು.    – ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಒಂದೆಡೆ ಉದ್ಯಾನ ನಗರಿಯ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಹನನವಾಗುತ್ತಿದ್ದರೆ, ಮತ್ತೊಂದೆಡೆ ರಸ್ತೆ ಬದಿಯಲ್ಲಿರುವ ಮರಗಳ ಬುಡಕ್ಕೆ ಕಾಂಕ್ರೀಟ್‌ ಸುರಿದು, ಪೇವರ್ಸ್‌ ಅಳವಡಿಸುತ್ತಿರುವುದಕ್ಕೆ ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳ ಕಳವಳ
ವ್ಯಕ್ತಪಡಿಸಿದ್ದಾರೆ.

ವಿಜಯನಗರದ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಬಸ್‌ ನಿಲ್ದಾಣದ ನೂತನ ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿರುವ 8–10 ಮರಗಳ ಬುಡಕ್ಕೆ ಈಗಾಗಲೇ ಕಾಂಕ್ರೀಟ್‌ ಹಾಕಿ ಮುಚ್ಚಲಾಗಿದೆ. ಅದರ ಮೇಲೆ ಪೇವರ್ಸ್‌ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಪಾದಚಾರಿ ಮಾರ್ಗ ನಿರ್ಮಿಸುತ್ತಿರುವುದರಿಂದ ಇಲ್ಲಿರುವ ಹತ್ತಾರು ಮರಗಳಿಗೆ ಕುತ್ತು ಬಂದೊದಗಿದೆ.

ಏಳೆಂಟು ವರ್ಷಗಳ ಹಿಂದೆ ನೆಡಲಾಗಿದ್ದ ಅರಳಿ ಸಸಿಯು ಈಗ ಮರವಾಗಿ ಬೆಳೆಯುತ್ತಿದೆ. ಆದರೆ ಬಿಬಿಎಂಪಿ ನೂತನವಾಗಿ ನಿರ್ಮಿಸುತ್ತಿರುವ ಪಾದಚಾರಿ ಮಾರ್ಗದಿಂದ ಅದರ ಬೆಳವಣಿಗೆಗೆ ಅಪಾಯ ಎದುರಾಗಿದೆ. ಅವುಗಳು ಭವಿಷ್ಯದಲ್ಲಿ ಬೆಳೆಯದ ರೀತಿಯಲ್ಲಿ ಕಾಮಗಾರಿ ಕೈಗೊಂಡಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಮರಗಳ ಬೆಳವಣಿಗೆಗೆ ಪೂರಕವಾಗಿ ಬೇರುಗಳಿಗೆ ನೀರು ಮತ್ತು ಪೋಷಕಾಂಶ ಅಗತ್ಯ. ಹೊಸದಾಗಿ ಬೆಳೆಯುತ್ತಿರುವ ಮರಗಳ ಬೇರುಗಳು ನೆಲದಾಳಕ್ಕೆ ಹೋಗಿರುವುದಿಲ್ಲ. ಹೀಗಾಗಿ ಬೆಳವಣಿಗೆಯ ಹಂತದಲ್ಲಿರುವ ಮರಗಳು ಬುಡದ ಭಾಗದಿಂದಲೇ ನೀರನ್ನು ಹೀರುತ್ತವೆ. ಇಂಥ ಮರಗಳ ಬುಡವನ್ನು ಸಂಪೂರ್ಣವಾಗಿ ಕಾಂಕ್ರೀಟ್‌ ಮತ್ತು ಪೇವರ್ಸ್‌ ಅಳವಡಿಸಿ ಮುಚ್ಚಿದರೆ ಬೇರುಗಳಿಗೆ ನೀರು ಸಿಗದೇ ಮರಗಳು ಒಣಗಿ ಹೋಗುತ್ತವೆ.

ಈ ಪಾದಚಾರಿ ಮಾರ್ಗದಲ್ಲಿರುವ ಮರಗಳ ಬುಡಕ್ಕೆ ಕಾಂಕ್ರೀಟ್‌ ಹಾಕಲಾಗಿದ್ದು, ಅದರ ಮೇಲೆ ಎಂಸ್ಯಾಂಡ್‌ ಹಾಕಿ ಪೇವರ್ಸ್‌ ಅಳವಡಿಸುತ್ತಿದ್ದಾರೆ.

‘ಇಲ್ಲಿರುವ ಕೆಲವು ಮರಗಳು ಬೆಳೆದು ದೊಡ್ಡದಾಗಿವೆ. ಒಂದೆರಡು ಮರಗಳು ಇನ್ನೂ ಬೆಳೆಯುತ್ತಿವೆ. ಅವುಗಳ ಸುತ್ತಲೂ ಎರಡರಿಂದ ಮೂರು ಅಡಿ ಜಾಗ ಬಿಡಬೇಕು. ಇದರಿಂದ ನೀರು ನಿಲ್ಲುವುದಕ್ಕೆ, ಇಂಗುವುದಕ್ಕೆ ಮತ್ತು ಬೇರುಗಳು ಬೆಳೆಯುವುದಕ್ಕೆ ಅನುಕೂಲ
ವಾಗುತ್ತದೆ. ಆದರೆ, ಅವುಗಳ ಬೆಳಣಿಗೆಗೆ ಕುಂಟಿತಗೊಳಿಸುವ ರೀತಿಯಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸುತ್ತಿರುವ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲದಿರುವುದು ದುರಂತವೇ ಸರಿ’ ಎಂದು ಪರಿಸರ ಪ್ರೇಮಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

‘ಮರಗಳ ಬುಡಕ್ಕೆ ಸಿಮೆಂಟ್‌ ಹಾಕುವುದರಿಂದ ಆಗುವ ಹಾನಿಯ ಬಗ್ಗೆ ಪಾಲಿಕೆ ಹಾಗೂ ಬಿಬಿಎಂಪಿ ಅರಣ್ಯ ಅಧಿಕಾರಿಗಳು, ರಸ್ತೆ
ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಈ ಕುರಿತು ಅರಿವು ಮೂಡಿಸಬೇಕು. ಈಗಾಗಲೇ ರಸ್ತೆ ಬದಿಯಲ್ಲಿನ ಮರಗಳ ಬುಡಕ್ಕೆ ಹಾಕಿರುವ ಸಿಮೆಂಟ್‌ ಅನ್ನು ತೆಗೆಸುವ ಕೆಲಸವನ್ನೂ ತ್ವರಿತವಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.